ಕರೀಂ ಲಾಲ ತೆಲಗಿ ಮತ್ತು ಬಾಲಿವುಡ್: ಒಂದು ಪ್ರೇಮಕಥೆ
ಕರೀಂ ಲಾಲ ತೆಲಗಿ ಮತ್ತು ಬಾಲಿವುಡ್: ಒಂದು ಪ್ರೇಮಕಥೆ
ಸಿ- ಗ್ರೇಡ್ ಹಿಂದಿ ಸಿನಿಮಾಗಳ ಮೇಲೆ ಲಾಲನ ಬಂಡವಾಳ
ಕರೀಂ ಲಾಲ ಬಂಟರ ಹಾದಿಯ ಹಿಂದೆ ಬಿದ್ದಿರುವ ಎಸ್‌ಐಟಿ ಮೊಗೆಯುತ್ತಿದ್ದಷ್ಟೂ ಹೊಸ ವಿಚಾರಗಳು ಹೊರಬರುತ್ತಿದ್ದು, ತೆಲಗಿಯ ಕೈ ಎಷ್ಟು ಉದ್ದವಾಗಿತ್ತು ಎಂಬುದನ್ನು ಸಾಬೀತು ಪಡಿಸುತ್ತಿವೆ. ಕೆಲವು ಸಿ- ಗ್ರೇಡ್ ಹಿಂದಿ ಸಿನಿಮಾಗಳಿಗೆ ಲಾಲ ಹಣಕಾಸು ಸಹಾಯ ಒದಗಿಸಿರುವುದು ಎಸ್‌ಐಟಿ ನಡೆಸಿರುವ ವಿಚಾರಣೆಯಿಂದ ಪತ್ತೆಯಾಗಿದೆ.
ಬಾಲಿವುಡ್‌ನ ಕೆಲವು ನಿರ್ಮಾಪಕರು ಹಾಗೂ ವಿತರಕರನ್ನು ವಿಚಾರಣೆಗೆ ಒಳಪಡಿಸಿದಾಗ ‘ಸಾನ ಮೂವೀಸ್ ಇಂಟರ್‌ನ್ಯಾಷನಲ್’ ಎಂಬ ವಿತ್ತ ನೆರವು ಸಂಸ್ಥೆಯಾಂದನ್ನು ತೆಲಗಿ ನಡೆಸುತ್ತಿದ್ದುದು ಗೊತ್ತಾಗಿದೆ. 2000ನೇ ಇಸವಿಯಲ್ಲಿ ‘ಬೀವಿ ಕಮಾಲ್ ಕಿ ಸಾಲಿ ಧಮಾಲ್ ಕಿ’ ಎಂಬ ಪೋಲಿ ಚಿತ್ರಕ್ಕೆ ಲಾಲ ಹಣಕಾಸು ಸಹಾಯ ಮಾಡಿದ್ದ. ಕೇತ್ನವ್ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ನಡೆದಿತ್ತು. ಹೆಸರಾಂತ ಹಿನ್ನೆಲೆ ಗಾಯಕ ಉದಿತ್ ನಾರಾಯಣ ಹಾಗೂ ಆತನ ಪತ್ನಿ ಆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ‘ಚೈನ್‌ಪುರ್ ಕಿ ದಾಸ್ತಾನ್’ ಮತ್ತು ‘ಆನಿ ಗುಲ್‌ಮೊಹರ್ ಫುಲೆ ಲಗ್ಲ’ ಎಂಬ ಟೀವಿ ಧಾರಾವಾಹಿಗಳಿಗೂ ತೆಲಗಿ ಹಣಕಾಸು ಸಹಾಯ ಮಾಡಿದ್ದ. ಒಬ್ಬ ಗೆಳೆಯ ‘ಸಿನಿಮಾ ಹಾಗೂ ಧಾರಾವಾಹಿಗಳ ಮೇಲೆ ದುಡ್ಡು ಹಾಕು ಗುರು’ ಅಂತ ಸಲಹೆ ಕೊಟ್ಟಿದ್ದೇ ತಡ ತೆಲಗಿ ತನ್ನ ಮಗಳ ಹೆಸರಿನಲ್ಲೇ ಸಿನಿಮಾ ಫೈನಾನ್ಸ್ ಸಂಸ್ಥೆಯನ್ನೇ ಹುಟ್ಟುಹಾಕಿದ. ಅವನ ಹತ್ತಿರ ಎಷ್ಟು ಹಣ ಇದ್ದಿತ್ತು ಎಂಬುದಕ್ಕಿದು ನಿದರ್ಶನ ಎನ್ನುತ್ತಾರೆ ಪೊಲೀೕಸರು.
ವಿಚಾರಣೆ ಇನ್ನೂ ಮುಂದುವರೆದಿದ್ದು, ನಿತಿನ್ ಮನಮೋಹನರ ‘ಲವ್ ಕೆ ಲಿಯೇ ಕುಚ್ ಭೀ ಕರೇಗ’, ಹರ್ಮೇಶ್ ಮಲ್ಹೋತ್ರ ಅವರ ‘ಅಖಿಯೋಂ ಸೆ ಗೋಲಿ ಮಾರೆ’ ಮತ್ತು ಅಯೇಷಾ ಶ್ರಾಫ್ ನಿರ್ಮಾಣದ ‘ಜಿಸ್ ದೇಶ್ ಮೆ ಗಂಗಾ ರೆಹತೀ ಹೈ’ ಚಿತ್ರಗಳಿಗೂ ಲಾಲ ಹಣಕಾಸು ಸಹಾಯ ಮಾಡಿರುವ ಶಂಕೆಯಿದೆ. ಆದರೆ ಈ ಮೂವರೂ ನಿರ್ಮಾಪಕರು ತಮಗೆ ಲಾಲ ಯಾರೆಂದೇ ಗೊತ್ತಿಲ್ಲ , ಮೊನ್ನೆ ಮೊನ್ನೆ ಪೇಪರ್‌ನಲ್ಲಿ ಓದಿದಾಗಲೇ ಗೊತ್ತಾಗಿದ್ದು ಎಂದು ಹೇಳುತ್ತಿದ್ದಾರೆ. ನಿರ್ಮಾಪಕರಿಗೆ ಖುದ್ದಾಗಿ ಗೊತ್ತಾಗದೆಯೇ ಲಾಲ ಚಿತ್ರಗಳಲ್ಲಿ ಹಣ ತೊಡಗಿಸಿರುವ ಗುಮಾನಿಯೂ ಪೊಲೀಸರಿಗಿದೆ.
(ಏಜೆನ್ಸೀಸ್)
ಪೂರಕ ಓದಿಗೆ-
ನಕಲಿ ಛಾಪಾ ಕಾಗದಗಳ ಸರದಾರ ತೆಲಗಿಗೆ ಜೈಲಲ್ಲಿ ಏಡ್ಸ್ !
9 ಸಾವಿರ ರುಪಾಯಿ ಪಗಾರ ಪಡೆಯುವ ಈ ಪೊಲೀಸನ ಆಸ್ತಿ 100 ಕೋಟಿ
ಮುಖಪುಟ / ವಾಟ್ಸ್ ಹಾಟ್












Click it and Unblock the Notifications