ಸಾಹಿತ್ಯ ಪರಿಷತ್ತಿಗೆ ‘ಅಮ್ಮನ ಸೆಳೆತ’ ಇಲ್ಲ - ಬರಗೂರು ವಿಷಾದ
ಸಾಹಿತ್ಯ ಪರಿಷತ್ತಿಗೆ ‘ಅಮ್ಮನ ಸೆಳೆತ’ ಇಲ್ಲ - ಬರಗೂರು ವಿಷಾದ
ಕಮಲಾ ಹಂಪನಾ ಅವರಿಗೆ ಅಭಿನಂದನೆ- ಸನ್ಮಾನ
ಅಮ್ಮನಂತೆ ಮಕ್ಕಳನ್ನು ಸೆಳೆಯುವ ಸಾಮರ್ಥ್ಯ ಪರಿಷತ್ತಿಗೆ ಇಲ್ಲ . ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳಗಳು ದುಬಾರಿ ಸಮ್ಮೇಳನಗಳಾಗಿ ಪರಿಣಮಿಸಿವೆಯೇ ಹೊರತು, ಅರ್ಥಪೂರ್ಣ ಚರ್ಚೆಯ ಚಾವಡಿಗಳಾಗಿಲ್ಲ . ಸಮ್ಮೇಳನಾಧ್ಯಕ್ಷರು ಏನು ಮಾತನಾಡಬೇಕು ಎನ್ನುವ ಆದೇಶ-ಒತ್ತಡ ಹೊರಗಿನಿಂದ ಬರುವ ಪರಿಸ್ಥಿತಿಯಿದೆ ಎಂದು ಬರಗೂರು ವಿಷಾದಿಸಿದರು. 71ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹಂಪನಾ ಅವರ ಅಭಿನಂದನಾ ಸಮಾರಂಭದಲ್ಲಿ ಬರಗೂರು ಮಾತನಾಡುತ್ತಿದ್ದರು (ನ.18). ಬೆಂಗಳೂರು ನಗರ ಜಿಲ್ಲಾ ಕಸಾಪ ಈ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿತ್ತು .
ಸ್ತ್ರೀ ಎನ್ನುವ ಕಾರಣಕ್ಕಾಗಿ ಕಮಲಾ ಹಂಪನಾ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎನ್ನುವ ಟೀಕೆ ಸರಿಯಲ್ಲ . ಕಮಲಾ ಅವರನ್ನು ಅವರ ಅರ್ಹತೆಯನ್ನು ಪರಿಗಣಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದ ಬರಗೂರು- ಅಧ್ಯಕ್ಷರ ಆಯ್ಕೆಯ ಮುನ್ನ ಚರ್ಚೆಗಳು ನಡೆಯಲಿ. ಆದರೆ, ಆಯ್ಕೆಯ ನಂತರ ವಾದ ವಿವಾದಗಳನ್ನು ನಿಲ್ಲಿಸಬೇಕು ಎಂದರು.
ಕಾಲಿಗೆ ಬೀಳುವ ಮತ್ತು ಕಾಲೆಳೆಯುವ ಪ್ರವೃತ್ತಿ ರಾಜಕಾರಣದಲ್ಲಿ ಮಾತ್ರವಲ್ಲದೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ವ್ಯಾಪಕವಾಗಿದೆ. ಸಾಹಿತಿಗಳಲ್ಲಿ ಪರಸ್ಪರ ಕಾಲೆಳೆಯುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಬರಗೂರು ಟೀಕಿಸಿದರು.
ಅಭಿನಂದನೆ-ಸನ್ಮಾನಕ್ಕೆ ಧನ್ಯವಾದ ಹೇಳಿದ ಕಮಲಾ ಹಂಪನಾ, ಸಾಹಿತ್ಯದಲ್ಲಿ ಲಿಂಗ ತಾರತಮ್ಯ ಸಲ್ಲದೆಂದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಲ್ಲೇಪುರಂ ಜಿ.ವೆಂಕಟೇಶ್, ಲೇಖಕಿ ಡಾ.ಎಸ್.ವಿ.ಪ್ರಭಾವತಿ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಕೋ.ವೆಂ.ರಾಮಕೃಷ್ಣೇಗೌಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications