ನಕ್ಸಲೀಯರ ಬುಡಮೇಲು ಮಾಡಲು ಕ್ಷಿಪ್ರ ಕಾರ್ಯ ಪಡೆ ರಚನೆ
ನಕ್ಸಲೀಯರ ಬುಡಮೇಲು ಮಾಡಲು ಕ್ಷಿಪ್ರ ಕಾರ್ಯ ಪಡೆ ರಚನೆ
ಹಾವಳಿ ಹೆಚ್ಚಿರುವ ಜಿಲ್ಲೆಗಳಲ್ಲಿ 60 ಕೋಟಿ ರು. ವಿಶೇಷ ಯೋಜನೆ
ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಯಲ್ಲಿ ಕೆಲಸ ಮಾಡುತ್ತಿರುವ ಧೈರ್ಯಶಾಲಿ ಯುವ ಪೊಲೀಸರನ್ನು ಆಯ್ದು ಕ್ಷಿಪ್ರ ಕಾರ್ಯ ಪಡೆಗೆ ನಿಯೋಜಿಸಲಾಗುವುದು. ಅಗತ್ಯ ಬಿದ್ದರೆ ಬಿಸಿರಕ್ತದ ಹೊಸ ಯುವ ಪ್ರತಿಭೆಗಳನ್ನೂ ನೇಮಿಸಿಕೊಳ್ಳಲಾಗುವುದು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ (ನ. 18) ಸುದ್ದಿಗಾರರಿಗೆ ತಿಳಿಸಿದರು.
ಸೋಮವಾರದ ಪೊಲೀಸ್ ಎನ್‌ಕೌಂಟರ್ ಘಟನೆ ನಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಖರ್ಗೆ ಹೇಳಿದರು. ಸಭೆಯಲ್ಲಿ ಖರ್ಗೆ, ಪೊಲೀಸ್ ಮಹಾ ನಿರ್ದೇಶಕ ಟಿ.ಮಡಿಯಾಳ್, ಗೃಹ ಸಚಿವಾಲಯದ ಆಯುಕ್ತ ಅದೀಪ್ ಚೌಧುರಿ ಮತ್ತಿತರ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಎನ್‌ಕೌಂಟರ್ ವೇಳೆ ಪೊಲೀಸರಿಂದ ಇಬ್ಬರು ನಕ್ಸಲೇಟರು ತಪ್ಪಿಸಿಕೊಂಡಿದ್ದು, ಅವರಿಗಾಗಿ ತೀವ್ರ ಶೋಧ ಮುಂದುವರೆದಿದೆ. ಗಾಯಗೊಂಡಿರುವ ಇನ್ನೊಬ್ಬ ನಕ್ಸಲ್ ಮಹಿಳೆಯನ್ನು ಪ್ರಶ್ನೆಗೆ ಒಳಪಡಿಸಲಾಗುತ್ತಿದ್ದು, ಇನ್ನಷ್ಟು ಮಹತ್ವದ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ ಎಂದು ಖರ್ಗೆ ಸುದ್ದಿಗಾರರ ಪ್ರಶ್ನೆಯಾಂದಕ್ಕೆ ಉತ್ತರಿಸಿದರು.
ನಕ್ಸಲ್ ಹಾವಳಿ ಮಟ್ಟಹಾಕಲು 60 ಕೋಟಿ ರುಪಾಯಿ ವಿಶೇಷ ಯೋಜನೆ
ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಮಂದಿಯನ್ನು ಕಾಡಿನಿಂದ ಬೇರೆಡೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಈ ಜನರಿಗೆ ಪುನರ್ವಸತಿ ಸೌಕರ್ಯ ಕಲ್ಪಿಸಲು 60 ಕೋಟಿ ರುಪಾಯಿ ಮೊತ್ತದ ಯೋಜನೆಯಾಂದನ್ನು ಸಿದ್ಧಪಡಿಸಲಾಗಿದೆ. ಈ ಕಾಡುಗಳಲ್ಲಿ ಬೀಡುಬಿಟ್ಟಿರುವ ನಕ್ಸಲೀಯರನ್ನು ಮಟ್ಟ ಹಾಕಲು ಈ ಕ್ರಮ ಅನಿವಾರ್ಯವಾಗಿದೆ ಎಂದರು.
ಸಾಮಾಜಿಕ ಹಾಗೂ ಆರ್ಥಿಕ ನೆಲೆಗಟ್ಟಿನಲ್ಲಿ ಸರ್ಕಾರ 600 ಎಕರೆ ವಿಸ್ತೀರ್ಣದ ಅರಣ್ಯದಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಿಸಲು ತೀರ್ಮಾನಿಸಿದೆ. ನಕ್ಸಲೀಯರ ದಾಳಿಯಾಂದೇ ಸಮಸ್ಯೆಯಲ್ಲ. ಈ ಅರಣ್ಯ ಪ್ರದೇಶದಲ್ಲಿ ವಾಸಿಸುವ ಇನ್ನಷ್ಟು ಮಂದಿ ನಕ್ಸಲೀಯರಾಗುವ ಆತಂಕವಿದೆ. ಹೀಗಾಗಿ ಮೂರೂ ಜಿಲ್ಲೆಗಳಲ್ಲಿ ನಕ್ಸಲೀಯರು ಹೆಚ್ಚಾಗಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಪತ್ತೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆಂಧ್ರಪ್ರದೇಶ ಕೆಲವು ವರ್ಷಗಳ ಹಿಂದೆಯೇ ಇಂತಹ ಯೋಜನೆಯನ್ನು ಕೈಗೆತ್ತಿಕೊಂಡಿತ್ತು ಎಂ ದು ಖರ್ಗೆ ಸಮಜಾಯಿಷಿ ಕೊಟ್ಟರು.
ಈ ಯೋಜನೆಯ ಮುಂದಿನ ಬೆಳವಣಿಗೆ ಬಗ್ಗೆ ಚರ್ಚಿಸಲು ನವೆಂಬರ್ 21ರಂದು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಯಲಿದೆ. ಗಡಿ ಪ್ರದೇಶಗಳಲ್ಲಿನ ಜಿಲ್ಲೆಗಳಾದ ತುಮಕೂರು, ರಾಯಚೂರು ಹಾಗೂ ಗುಲ್ಬರ್ಗಾದಲ್ಲೂ ಇಂತಹ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications