ತಮಿಳುನಾಡು ಪತ್ರಕರ್ತರ ಬಂಧನಕ್ಕೆ ಸುಪ್ರಿಂಕೋರ್ಟ್ ತಡೆ
ತಮಿಳುನಾಡು ಪತ್ರಕರ್ತರ ಬಂಧನಕ್ಕೆ ಸುಪ್ರಿಂಕೋರ್ಟ್ ತಡೆ
ಶಾಸನಸಭೆಗಳಿಗೆ ನೀಡಲಾಗಿರುವ ಸವಲತ್ತುಗಳ ಕುರಿತು ಪುನಃ ಚಿಂತನೆ ಅಗತ್ಯ- ಸಾಳ್ವೆ
ದಿ ಹಿಂದೂ ಪತ್ರಿಕೆಯ ಸಂಪಾದಕ ಎನ್.ರವಿ, ಕಾರ್ಯ ನಿರ್ವಾಹಕ ಸಂಪಾದಕ ಮಾಲಿನಿ ಪಾರ್ಥಸಾರಥಿ, ಪ್ರಕಾಶಕ ಎಸ್.ರಂಗರಾಜನ್, ಬ್ಯೂರೊ ಮುಖ್ಯಸ್ಥ ವಿ.ಜಯಂತ್ ಹಾಗೂ ವಿಶೇಷ ಪ್ರತಿನಿಧಿ ರಾಧಾ ವೆಂಕಟೇಶನ್ ಮತ್ತು ಮುರಸೋಳಿ ಪತ್ರಿಕೆಯ ಸಂಪಾದಕ ಎಸ್.ಸೆಲ್ವಂ ಅವರನ್ನು ಬಂಧಿಸುವಂತೆ ಕಳೆದ ವಾರ ತಮಿಳುನಾಡು ವಿಧಾನಸಭೆ ಆದೇಶ ಹೊರಡಿಸಿತ್ತು. ಜಯಂತ್ ಮತ್ತು ವೆಂಕಟೇಶನ್ ಅವರು ಬರೆದ ಸಂಪಾದಕೀಯ ಬರಹಗಳ ಸಂಬಂಧ ಸ್ಪೀಕರ್ ಕೆ.ಕಾಳಿಮುತ್ತು ಈ ಆದೇಶ ಹೊರಡಿಸಿದ್ದರು. ಇದೇ ಲೇಖನವನ್ನು ಮುರಸೋಳಿ ಪತ್ರಿಕೆ ಆನಂತರ ಪ್ರಕಟಿಸಿತ್ತು.
ಹದಿನೈದು ದಿನಗಳ ಸಾದಾ ಜೈಲುಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ಹಿಂದೂ ಹಾಗೂ ಮುರಸೋಳಿ ಪತ್ರಿಕೆಗಳು ಕೋರ್ಟಿನ ಮೆಟ್ಟಿಲು ಹತ್ತಿದ್ದವು. ನ್ಯಾಯಮೂರ್ತಿ ವೈ.ಜೆ.ಸಭರ್‌ವಾಲ್ ಹಾಗೂ ಎಸ್.ಪಿ.ಸಿನ್ಹ ಅವರನ್ನೊಳಗೊಂಡ ನ್ಯಾಯಪೀಠ, ತಮಿಳುನಾಡು ವಿಧಾನಸಭೆಯ ಆದೇಶಕ್ಕೆ ತಡೆ ನೀಡಿತು.
ಶಾಸನಸಭೆಗಳಿಗೆ ನೀಡಲಾಗಿರುವ ಸವಲತ್ತುಗಳ ಕುರಿತು ಪುನಃ ಚಿಂತಿಸಬೇಕಾದ ಸಂದರ್ಭ ಒದಗಿದೆ ಎಂದು ಹಿಂದೂ ಪತ್ರಿಕೆಯ ಪರವಾಗಿ ವಾದ ಮಂಡಿಸಿದ ಹರೀಶ್ ಸಾಳ್ವೆ ಹೇಳಿದರು. ಕಪಿಲ್ ಸಿಬಾಲ್ ಮುರಸೋಳಿ ಪತ್ರಿಕೆಯನ್ನು ಪ್ರತಿನಿಧಿಸಿದ್ದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications