ಧಾರವಾಡದಲ್ಲಿ ಮುದ್ರಣ-ವಿದ್ಯುನ್ಮಾನ ಮಾಧ್ಯಮ ಅವಲೋಕನ
ಧಾರವಾಡದಲ್ಲಿ ಮುದ್ರಣ-ವಿದ್ಯುನ್ಮಾನ ಮಾಧ್ಯಮ ಅವಲೋಕನ
ಪರಿಣತರೊಂದಿಗೆ ಧಾರವಾಡ ವಿವಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಮುಖಾಮುಖಿ. ಆದರ್ಶ ಮೈಗೂಡಿಸಿಕೊಳ್ಳಲು ಪಾಪು ಕರೆ.
- ಎಸ್ಕೆ.ಶಾಮಸುಂದರ, ಧಾರವಾಡದಿಂದ
ಧಾರವಾಡ : ‘ಪತ್ರಕರ್ತರು ಬದ್ಧತೆಯಿಂದ ಬದುಕಬೇಕು. ಸತ್ಯ, ನ್ಯಾಯ, ಸುಧಾರಣೆಗಳಲ್ಲಿ ಲೀನರಾಗಬೇಕು. ಹಾಗೂ ಯುವ ಪತ್ರಕರ್ತರು ಆದರ್ಶ ಇಟ್ಟುಕೊಳ್ಳುವ ಜೊತೆಗೆ ಉತ್ತಮ ಬರವಣಿಗೆ ಶೈಲಿಯನ್ನು ರೂಢಿಸಿಕೊಳ್ಳಬೇಕು’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ‘ಮುದ್ರಣ, ವಿದ್ಯುನ್ಮಾನ ಮಾಧ್ಯಮ: ಅವಲೋಕನ’ ಎನ್ನುವ ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭ (ನ. 9, ಭಾನುವಾರ) ದಲ್ಲಿ ಪಾಟೀಲ ಪುಟ್ಟಪ್ಪ ಮಾತನಾಡುತ್ತಿದ್ದರು. ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಹಾವೇರಿ, ಗದಗ, ಧಾರವಾಡ ಜಿಲ್ಲೆಯ ಪತ್ರಕರ್ತರಿಗಾಗಿ ನಡೆದ ಈ ಕಮ್ಮಟ ಶನಿವಾರ (ನ.8) ಆರಂಭಗೊಂಡಿತ್ತು .
ಭಾನುವಾರ ನಡೆದ ಕಾರ್ಯಾಗಾರದಲ್ಲಿ http://www.thatskannada.com ಸಂಪಾದಕ ಎಸ್.ಕೆ.ಶಾಮಸುಂದರ ‘ಅಂತರ್ಜಾಲ ಪತ್ರಿಕೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ’ ಎನ್ನುವ ವಿಷಯದ ಕುರಿತು ಮಾತನಾಡಿದರು.
‘ವಿದ್ಯುನ್ಮಾನ ಮಾಧ್ಯಮ: ಸುದ್ದಿ ಸಜ್ಜುಗೊಳಿಸುವುದು ಹೇಗೆ ?’ ವಿಷಯದ ಕುರಿತು ಉದಯ ಟೀವಿಯ ಪ್ರಧಾನ ಸಂಪಾದಕ ಮುಂಜಾನೆ ಸತ್ಯ, ‘ಬದಲಾದ ಪರಿಸ್ಥಿತಿಯಲ್ಲಿ ಬಾನುಲಿ ಪಾತ್ರ’ ವಿಷಯದ ಕುರಿತು ಧಾರವಾಡ ಆಕಾಶವಾಣಿಯ ಬಾತ್ಮೀದಾರ ಡಾ.ಶಿವರಾಮ ಪೈಲೂರ ಹಾಗೂ ‘ಮುದ್ರಣ ಮಾಧ್ಯಮದ ಇತ್ತೀಚಿನ ಆವಿಷ್ಕಾರ’ ವಿಷಯದ ಕುರಿತು ಪ್ರಜಾವಾಣಿ ಪತ್ರಿಕೆ- ಬೆಳಗಾವಿಯ ಹಿರಿಯ ವರದಿಗಾರ ಓಂಕಾರ ಕಾಕಡೆ ಮಾತನಾಡಿದರು.
ಧಾರವಾಡ ಕರ್ನಾಟಕ ವಿ.ವಿ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎನ್.ಅರ್ಜುನ ದೇವ ವಂದಿಸಿದರು. ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಕೆಳಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಉಪನ್ಯಾಸದ ನಂತರ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಹ್ವಾನಿತ ಪರಿಣತರೊಂದಿಗೆ ಸಂವಾದ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಭಾಗಿಯಾದರು.
ಮುಖಪುಟ / ವಾರ್ತೆಗಳು












Click it and Unblock the Notifications