ನ. 15ಕ್ಕೆ ಬೆಂಗಳೂರಲ್ಲಿ ಲೆಜೆಂಡ್ ‘ಕಿಶೋರ್ ದಾ ಕೆ ಗೀತ್‌ಮಾಲ’
ನ. 15ಕ್ಕೆ ಬೆಂಗಳೂರಲ್ಲಿ ಲೆಜೆಂಡ್ ‘ಕಿಶೋರ್ ದಾ ಕೆ ಗೀತ್‌ಮಾಲ’
ನೀವು ಕೊಳ್ಳುವ ಟಿಕೇಟಿನ ಹಣ ಒಳ್ಳೆಯ ಕೆಲಸಕ್ಕೆ ಬಳಕೆಯಾಗಲಿದೆ
‘ಮೇರಾ ಜೀವನ್ ಕೋರಾ ಕಾಗಜ್’ ಎಂದು ಹಾಡುತ್ತಾ ತಮ್ಮ ಕಂಠಶಕ್ತಿಯ ಶ್ವೇತಪತ್ರ ಕೊಟ್ಟ ಕಿಶೋರ್ ಬಲು ಮೂಡಿ ವ್ಯಕ್ತಿಯಾಗಿದ್ದವರು. ನೋಡೋಕೆ, ಹಾಡೋಕೆ ಮಜಾ ಮನುಷ್ಯ ಅಂತ ನ್ನಿಸಿದರೂ, ಎಂದೂ ಬೆಳೆದಿದ್ದೇನೆ ಅಂತ ಅವರು ಭಾವಿಸಿರಲೇ ಇಲ್ಲ. ಒಮ್ಮೊಮ್ಮೆಯಂತೂ ‘ಹಾಡುವುದು ನನ್ನ ಕರ್ಮ. ಬರೆಯುವುದು ಬರೆವವರ ಕರ್ಮ. ಅದೇನೂ ಸಾಧನೆಯಲ್ಲ. ನಾನೇನೂ ಸಾಧಿಸಿಲ್ಲ’ ಅಂತ ಹರಿಹಾಯ್ದದ್ದೂ ಉಂಟು. ಅಭಿಮಾನಿಯಾಬ್ಬ ಇವರ ಹಾಡುಗಳ ಸಿ.ಡಿ.ಯನ್ನು ಉಡುಗೊರೆಯಾಗಿ ಕೈಗಿತ್ತರೆ, ಅದನ್ನು ಎಸೆದು ಹೋಗಿದ್ದ ವಿಚಿತ್ರ ಪ್ರತಿಭೆ ಕಿಶೋರ್.
ಮನ್ನಾಡೇ, ರಫಿ, ಮುಖೇಶ್ ಮೊದಲಾದವರ ಕಂಠಕ್ಕಿಂತ ಹೆಚ್ಚು ರೇಂಜ್‌ನಿಂದ ಸದ್ದು ಮಾಡಿದ್ದ ಕಿಶೋರ್ ಹಾಡುಗಳು ಇವತ್ತಿಗೂ ಜನಪ್ರಿಯ. ಆತ ಹಾಡಿದ್ದ ‘ನೀಲೇ ನೀಲೇ ಅಂಬರ್ ಪೇ’ ಇವತ್ತು ರೀಮೇಕ್ ಆಗಿ, ಬಲು ದುಡ್ಡು ಮಾಡುತ್ತಿರುವ ಆಲ್ಬಂ.
ಇಂತಿದ್ದ ಕಿಶೋರ್ ಈಗ ನಮ್ಮೊಂದಿಗಿಲ್ಲ. ಅವರ ಹಾಡುಗಳು ಮಾತ್ರ ಹಾಗೇ ಇವೆ. ಆ ಹಾಡುಗಳಲ್ಲಿ ಕಿಶೋರ್ ಜೀವಂತವಾಗಿದ್ದಾರೆ. ನವೆಂಬರ್ 15ನೇ ತಾರೀಕು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬರೀ ಕಿಶೋರ್ ಗೀತೆಗಳದ್ದೇ ಕಾರುಬಾರು. ಅವತ್ತು ಕಿಶೋರ್ ನೆನಕೆಯಲ್ಲಿ ಆತನ ಹಾಡುಗಳ ಹಾಡುವ ಕಾರ್ಯಕ್ರಮವನ್ನು ರಮ್ಯ ಕಲ್ಚರಲ್ ಅಕಾಡೆಮಿ ಆಯೋಜಿಸಿದೆ. ಜಿಂಪೆಟ್ಸ್ ಮೋಹನ್, ವಿಶ್ವನಾಥ್, ನವೀನ್, ಇಂದಿರಾ ಶಂಕರ್, ಸುನಿತಾ ಹಾಗೂ ಗೌರಿ ಹಾಡುಗಳನ್ನು ಹಾಡುವರು.
‘ಲೆಜೆಂಡ್ಸ್’ ಸರಣಿಯ ಗೀತಮಾಲೆಯ ಈ ಕಾರ್ಯಕ್ರಮವನ್ನು ನೀವು ಟಿಕೇಟ್ ಕೊಂಡು ನೋಡಿದರೆ, ಅದರ ಹಣ ಉದಯೋನ್ಮುಖ ಗಾಯನ ಪ್ರತಿಭೆಗಳ ಉದ್ಧಾರಕ್ಕೆ ಬಳಕೆಯಾಗುತ್ತದೆ. ಟಿಕೆಟ್ ಮತ್ತು ಹೆಚ್ಚಿನ ವಿವರಗಳಿಗೆ ಈ ನಂಬರುಗಳಿಗೆ ಫೋನ್ ಮಾಡಿ- (080) 344 0336, 56706525, 9845272162, 6760713, 6762517.
‘ಹಮ್ ಜಬ್ ನ ಹೋಂಗೇತೋ, ರೋ ರೋಕೆ ದುನಿಯಾ, ಡೂಂಡೇಗಿ ಮೇರೆ ನಿಶಾನ್’ ಅಂತ ಕಿಶೋರ್ ಹಾಡಿದ್ದು ನಿಜ ಅನಿಸುತ್ತದೆ. ಅಲ್ಲವೇ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications