ವಿಮರ್ಶಕರ ಮೇಲೆ ನಿಡುಮಾಮಿಡಿ ಕಿಡಿ
ವಿಮರ್ಶಕರ ಮೇಲೆ ನಿಡುಮಾಮಿಡಿ ಕಿಡಿ
‘ನಾಲ್ಕನೇ ತರಗತಿಯನ್ನೂ ಪಾಸ್ ಮಾಡದಿದ್ದ ಜಚನಿ ದಾಖಲೆ ಸಂಖ್ಯೆಯ ಕೃತಿಗಳನ್ನು ಬರೆದದ್ದು ವಿಮರ್ಶಕರು ಗುರುತಿಸಲಿಲ್ಲ.’
ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ದತ್ತಿಯ ಡಾ.ಜಚನಿ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಚನ್ನಮಲ್ಲ ಸ್ವಾಮೀಜಿ ಗುರುವಾರ (ನ. 06) ಮಾತಾಡುತ್ತಿದ್ದರು. ಕನ್ನಡ ವಿಮರ್ಶಕರಲ್ಲಿ ಎರಡು ವಿಧ- ಒಂದು ‘ಜೈ ವಿಮರ್ಶಕರು’, ಇನ್ನೊಂದು ‘ಬೈ ವಿಮರ್ಶಕರು’. ಮೊದಲ ಗುಂಪು ಕಳಪೆ ಸಾಹಿತ್ಯವನ್ನು ಶ್ರೇಷ್ಠ ಎಂದು ಬಿಂಬಿಸಿದರೆ, ಎರಡನೆಯ ಗುಂಪಿಗೆ ತೆಗಳುವ ವ್ಯಸನ. ಎಷ್ಟೋ ವಿಮರ್ಶಕರು ಯೂನಿವರ್ಸಿಟಿಯಲ್ಲಿ ಪಾಠ ಮಾಡುವವರು ಮಾತ್ರ ಬುದ್ಧಿವಂತರೆಂದು ಭಾವಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಅನಕೃ, ತರಾಸು ಹಾಗೂ ಜಚನಿಯಂತಹ ಉತ್ತಮ ಸಾಹಿತಿಗಳು ಹೆಚ್ಚು ಡಿಗ್ರಿಗಳನ್ನು ಗಳಿಸಿರಲಿಲ್ಲ. ಹಾಗಿದ್ದೂ ಅವರ ಕೃತಿಗಳನ್ನು ಪಕ್ಕಕ್ಕೆ ಇಡುವ ಹಾಗಿಲ್ಲ. ಆದರೆ, ಅದನ್ನು ಗುರುತಿಸಿ, ಬರೆಯುವ ಕೆಲಸವನ್ನು ಮಾಡುವ ಗೋಜಿಗೆ ವಿಮರ್ಶಕರು ಹೋಗಲೇ ಇಲ್ಲ. ಪ್ರಭುದೇವರ ನಂತರ ಕನ್ನಡ ಸಾಹಿತ್ಯದ ಅನುಭಾವದ ತುತ್ತತುದಿ ತಲುಪಿದವರೆಂದರೆ ಜಚನಿ ಮಾತ್ರ. ಅವರು ನಾಲ್ಕನೇ ತರಗತಿಯನ್ನೂ ಪಾಸ್ ಮಾಡಿರಲಿಲ್ಲ. ಜಗತ್ತಿನಲ್ಲಿ ಸಾಹಿತ್ಯದ ಪಾಂಡಿತ್ಯ ಇದ್ದ ಸ್ವಾಮೀಜಿ ಜಚನಿ ಒಬ್ಬರೇ ಎಂದರು.
ವೀರಶೈವ ಧರ್ಮಗುರು ಎಂಬ ಕಾರಣಕ್ಕೆ ಜಚನಿ ಅವರ ಸಾಹಿತ್ಯದ ವಿಮರ್ಶೆಯಾಗಲಿಲ್ಲ. ದಾಖಲೆ ಸಂಖ್ಯೆಯ ಕೃತಿಗಳನ್ನು ಬರೆದ ಇಂತಹ ಪ್ರತಿಭೆಯನ್ನು ವಿಮರ್ಶಕರು ಗಮನಿಸದಿದ್ದುದು ದುರದೃಷ್ಟಕರ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು.ಚನ್ನಬಸಪ್ಪ ವಿಷಾದಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications