ಮೈಸೂರು ಮೃಗಾಲಯವನ್ನು ರಾಜಕೀಯ ಪಶುಗಳಿಂದ ರಕ್ಷಿಸಿ
ಮೈಸೂರು ಮೃಗಾಲಯವನ್ನು ರಾಜಕೀಯ ಪಶುಗಳಿಂದ ರಕ್ಷಿಸಿ
ಮೃಗಾಲಯಕ್ಕೆ ರಾಜಕಾರಣಿ ಪ್ರವೇಶ, ಮಣ್ಣಾಗುತ್ತಿದೆ ಒಡೆಯರ್ ಕನಸು
- ವನ್ಯಪ್ರೇಮಿ
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ವನ್ಯಜೀವಿ), ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಹಾಗೂ ಮೂರು ಜನ ವನ್ಯಜೀವಿ ಆಸಕ್ತರು,(ಸರ್ಕಾರೇತರ ಸದಸ್ಯರು) ಇದ್ದರು. ಆದರೆ ಕಳೆದ ವರ್ಷ ಸರ್ಕಾರ ಆದೇಶ ಹೊರಡಿಸಿ, ರಾಜಕೀಯ ಪಕ್ಷವೊಂದಕ್ಕೆ ಸೇರಿದ ವ್ಯಕ್ತಿಯಾಬ್ಬರನ್ನು ಈ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಹಾಗೂ ಮತ್ತೊಬ್ಬ ರಾಜಕಾರಣಿಯನ್ನು ಸರ್ಕಾರೇತರ ಪ್ರತಿನಿಧಿ ಎಂದು ನೇಮಿಸಲಾಯಿತು. ಇದರಿಂದ ಪರಿಸರ, ವನ್ಯಜೀವಿಗಳ ಬಗ್ಗೆ ಏನೇನೂ ಗೊತ್ತಿರದ ವ್ಯಕ್ತಿಗಳು ಪ್ರಾಧಿಕಾರದ ಪ್ರಮುಖ ಹುದ್ದೆಗಳ ನಿಯಂತ್ರಣ ಹೊಂದಿದ್ದಾರೆ.
ಇಲ್ಲಿಯವರೆಗೆ ಮೈಸೂರು ಮೃಗಾಲಯವನ್ನು ಅಧಿಕಾರಗಳು ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ, ಪ್ರಾಣಿಗಳ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದರು. ಉದಾಹರಣೆಗೆ ಕಳೆದ ವರ್ಷ ಪ್ರಾಣಿಗಳ ಆಹಾರಕ್ಕೆಂದು ಸ್ವಾರ್ಥಿಗಳು ದೋಚುತ್ತಿದ್ದ 40 ಲಕ್ಷ ರೂಪಾಯಿ ಉಳಿತಾಯ ಮಾಡಿರುತ್ತಾರೆ. ಅತ್ಯಂತ ಬಿಗಿಯಾದ ಮೇಲ್ವಿಚಾರಣೆ, ಆಡಳಿತ ಹಾಗೂ ಶಿಸ್ತಿನ ಕ್ರಮಗಳಿಂದ ಮೃಗಾಲಯವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಆದರೆ ರಾಜಕೀಯ ವ್ಯಕ್ತಿಗಳಿಂದ ದೂರವಿದ್ದ ಈ ಸಂಸ್ಥೆ ಇಂದು ಅವರ ಪ್ರವೇಶದಿಂದಾಗಿ ವಿನಾಶದತ್ತ ಸಾಗುತ್ತಿದೆ.
ಅಷ್ಟೇ ಅಲ್ಲ . ವನ್ಯಜೀವಿ ಪ್ರೇಮಿಗಳಾದ ಇಬ್ಬರು ಸರ್ಕಾರೇತರ ಸದಸ್ಯರನ್ನೂ ಬದಲಾಯಿಸಿ ಅವರ ಸ್ಥಾನದಲ್ಲಿ ಇಬ್ಬರು ರಾಜಕಾರಣಿಗಳನ್ನು ನೇಮಿಸುವ ಯತ್ನ ನಡೆದಿದೆ. ಉತ್ತರ ಕರ್ನಾಟಕದ ಪ್ರತಿನಿಧಿಯನ್ನೂ ಬದಲಾಯಿಸುವ ಯತ್ನ ಮುಖ್ಯಮಂತ್ರಿಯವರ ಕಛೇರಿಯಲ್ಲಿ ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಆದೇಶವೂ ಹೊರಡಲಿದೆ. ಹೀಗೇನಾದರೂ ಬದಲಾಯಿಸಿದಲ್ಲಿ ಇಡೀ ಮೃಗಾಲಯ ಪ್ರಾಧಿಕಾರವೇ ರಾಜಕೀಯ ವ್ಯಕ್ತಿಗಳಿಂದ ತುಂಬಿಹೋಗಿ, ಯಾವ ಉದಾತ್ತ ಧ್ಯೇಯದಿಂದ ಈ ಮೃಗಾಲಯವನ್ನು ಆರಂಭಿಸಲಾಗಿತ್ತೋ ಅದೆಲ್ಲಾ ಮಣ್ಣು ಪಾಲಾಗಲಿದೆ. ತಮ್ಮ ಸ್ವಾರ್ಥ ಸಾಧನೆಗೆ ಇದು ರಾಜಕಾರಣಿಗಳಿಗೆ ವೇದಿಕೆಯಾಗಲಿದೆ.
ಆದ್ದರಿಂದ ಮೃಗಾಲಯ ಪ್ರಾಧಿಕಾರಕ್ಕೆ ಯಾವುದೇ ರೀತಿಯ ಹೊಸ ನೇಮಕ ಮಾಡಬಾರದೆಂದು ಹಾಗೂ ರಾಜಕಾರಣಿಗಳಿಂದ ಇದನ್ನು ದೂರವಿಡಬೇಕೆಂದು ದಯವಿಟ್ಟು ಎಲ್ಲಾ ಕನ್ನಡಿಗರು ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳ ಮೇಲೆ ಒತ್ತಡ ಹೇರಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ತನ್ಮೂಲಕ ನಮ್ಮ ರಾಜ್ಯದ ಭವ್ಯ ಆಕರ್ಷಣೆಯಾದ ಮೃಗಾಲಯಗಳನ್ನು ರಕ್ಷಿಸಬೇಕೆಂದು ವಿನಂತಿ.
ಮುಖ್ಯಮಂತ್ರಿಗಳ ಇ-ಮೇಲ್ ವಿಳಾಸ : [email protected]
ಮುಖಪುಟ / ವಾರ್ತೆಗಳು












Click it and Unblock the Notifications