2010ರ ಹೊತ್ತಿಗೆ ಕರ್ನಾಟಕದಲ್ಲಿ 10 ಲಕ್ಷ ಐಟಿ ಉದ್ಯೋಗ-ಕೃಷ್ಣ
2010ರ ಹೊತ್ತಿಗೆ ಕರ್ನಾಟಕದಲ್ಲಿ 10 ಲಕ್ಷ ಐಟಿ ಉದ್ಯೋಗ-ಕೃಷ್ಣ
ಬೆಂಗಳೂರು ಐಟಿ ಡಾಟ್ ಕಾಂ- 2003 ಮೇಳಕ್ಕೆ ಚಾಲನೆ
ಬೆಂಗಳೂರು ಐಟಿ ಡಾಟ್ ಕಾಂ 2003 ಮೇಳವನ್ನು ಶನಿವಾರ (ನ. 01) ಉದ್ಘಾಟಿಸಿ ಕೃಷ್ಣ ಮಾತನಾಡಿದರು. ಈ ಮುಂಚೆ ಸಾಫ್ಟ್‌ವೇರ್ ಮಂತ್ರ ಪಠಿಸುತ್ತಿದ್ದ ಕೃಷ್ಣ ಅವರ ಬಾಯಿತುಂಬಾ ಈ ಸಲ ಹಾರ್ಡ್‌ವೇರ್‌ದೇ ಮಾತು. ಬೆಂಗಳೂರಿನಲ್ಲಿ ಹಾರ್ಡ್‌ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವ ಹಾದಿಯಲ್ಲೂ ಕಾರ್ಯಪಡೆ ಸಾಗಿದೆ ಎಂದ ಮುಖ್ಯಮಂತ್ರಿ, 5 ಲಕ್ಷಕ್ಕೂ ಹೆಚ್ಚು ವೃತ್ತಿಪರರಿಗೆ ಹಾರ್ಡ್‌ವೇರ್ ಕ್ಷೇತ್ರ ಉದ್ಯೋಗ ಒದಗಿಸಲಿದೆ ಎಂದು ಭರವಸೆಯ ಮಿಂಚು ಮಿಂಚಿಸಿದರು.
ಐಟಿ ಉದ್ದಿಮೆಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಏಕ ಗವಾಕ್ಷಿ ಪದ್ಧತಿಯನ್ನು ಜಾರಿಗೆ ತರುವ ಹಾಗೂ ಕಾನೂನುಗಳ ಸುಧಾರಣೆ ಮಾಡುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯಲು ಸರ್ಕಾರ ಬೆನ್ನು ತಟ್ಟುತ್ತಿದೆ. ಹೀಗಾಗಿ ಬಂಡವಾಳದಾರರು ನಮ್ಮತ್ತ ಧಾವಿಸುತ್ತಿದ್ದಾರೆ. ಹಾಗಂತ ಎಗ್ಗಿಲ್ಲದ ಉದ್ದಿಮೆ ಬೆಳೆದು, ಇತರೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಸಾಧ್ಯವಿಲ್ಲ. ಇದಕ್ಕಾಗಿ ಬೆಳೆದಿರುವ ಐಟಿ ಉದ್ದಿಮೆಯ ನಿಯಂತ್ರಣಕ್ಕೆಂದೇ ಒಂದು ಕಾರಿಡಾರ್ ಸ್ಥಾಪಿಸಲು ಒಂದು ಜಾಗೆಯನ್ನು ಗೊತ್ತು ಪಡಿಸಿದ್ದೇವೆ ಎಂದರು.
ವ್ಯಾಪಾರ ಪ್ರಕ್ರಿಯೆ ಎರವಲು ಸೇವೆ (ಬಿಪಿಓ) ಕ್ಷೇತ್ರ ಈಚೆಗೆ ಸದ್ದು ಮಾಡುತ್ತಿದೆ. ಮೆಕ್‌ಕಿನ್ಸೆ ವರದಿ ಪ್ರಕಾರ 2010ನೇ ಇಸವಿ ಹೊತ್ತಿಗೆ ರಾಜ್ಯದಲ್ಲಿ 10 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಈ ಪೈಕಿ 40 ಪ್ರತಿಶತ ಬಿಪಿಓಗೆ ಸಂಬಂಧಪಟ್ಟಿರುತ್ತವೆ ಎಂದು ಹೇಳಿದರು.
ಕರ್ನಾಟಕ ಇವತ್ತು ಕೇವಲ ಐಟಿ ಉದ್ದಿಮೆ ಕೇಂದ್ರವಾಗಿ ಅಷ್ಟೇ ಅಲ್ಲದೆ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಕೇಂದ್ರಗಳ ತಾಣವಾಗಿಯೂ ಬೆಳೆದಿದೆ. 77 ಜಾಗತಿಕ ಕಂಪನಿಗಳು ಬೆಂಗಳೂರಲ್ಲಿ ಆರ್ ಅಂಡ್ ಡಿ ಕೇಂದ್ರಗಳನ್ನು ತೆರೆದಿವೆ. ಇನ್ನು ಕೆಲವು ಕಂಪನಿಗಳು ಇಲ್ಲಿನ ಖಾಸಗಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಆರ್ ಅಂಡ್ ಡಿ ಕೇಂದ್ರಗಳನ್ನು ನಡೆಸುತ್ತಿವೆ ಎಂದರು.
ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ತೊಂದರೆಗಳು ಬಗೆಹರಿದರೆ ಡಿಸೆಂಬರ್‌ನಲ್ಲಿ ಬೆಂಗಳೂರಿನ ಅಂತತರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಶುರುವಾಗುತ್ತದೆ. 33 ತಿಂಗಳಲ್ಲಿ ಯೋಜನೆ ಮುಗಿದು, ಬೆಂಗಳೂರಿಗೆ ವಿದೇಶೀಯರು ಸಲೀಸಾಗಿ ಬರುವಂತಾಗುತ್ತದೆ ಎಂದು ಪುನರುಚ್ಚರಿಸಿದರು.
ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲ ಟಿ.ಎನ್.ಚತುರ್ವೇದಿ, ಸಾಮಾನ್ಯರಿಗೆ ಐಟಿ ಎಂಬ ಹಳೇ ಮಂತ್ರವನ್ನು ಮತ್ತೆ ಹೇಳಿದರು. ಡಿಜಿಟಲ್ ಕಂದರವನ್ನು ಮುಚ್ಚಿ ಹಾಕುವಂತೆ ತಂತ್ರಜ್ಞಾನ ಬೆಳೆಯಬೇಕು ಎಂದು ಕರೆ ಕೊಟ್ಟರು.
ಬೆಂಗಳೂರು ಐಟಿ ಡಾಟ್ ಕಾಂನ ಆರನೇ ವರ್ಷದ ಈ ಕಂತಿನಲ್ಲಿ ಒಟ್ಟು 285 ಕಂಪನಿಗಳು ಭಾಗವಹಿಸಿವೆ. ಇನ್ನು ಐದು ದಿನಗಳ ಕಾಲ ಮೇಳ ನಡೆಯಲಿದೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications