ಹಾಸನ: ಗೌಡ್ರಗದ್ಲ ತಾರಕಕ್ಕೆ, ಪುಟ್ಟಸ್ವಾಮಿಗೌಡ ರಾಜೀನಾಮೆ?
ಹಾಸನ: ಗೌಡ್ರಗದ್ಲ ತಾರಕಕ್ಕೆ, ಪುಟ್ಟಸ್ವಾಮಿಗೌಡ ರಾಜೀನಾಮೆ?
ಪೊಲೀಸ್ ಅಧಿಕಾರಿ ವರ್ಗಾವಣೆ ಕಾರಣ ಮುಂದೆಹೋದ ದೇವೇಗೌಡರ ಧರಣಿ
ಮಾಜಿ ಪ್ರಧಾನಿ ದೇವೇಗೌಡರ ಒತ್ತಡಕ್ಕೆ ಮಣಿದು ಎಸ್ಪಿ ನಂಜುಂಡಸ್ವಾಮಿ ಅವರನ್ನು ವರ್ಗ ಮಾಡಿರುವ ಮುಖ್ಯಮಂತ್ರಿ ಕೃಷ್ಣ ಕ್ರಮಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಪಿ ವರ್ಗಾವಣೆ ಕುರಿತ ಆದೇಶ ಸೋಮವಾರ ರಾತ್ರಿ ಹೊರಬೀಳುತ್ತಿದ್ದಂತೆ ಹಾಸನ ಸಂಸದ ಪುಟ್ಟಸ್ವಾಮಿಗೌಡ ಕೆಂಡಾಮಂಡಲವಾಗಿದ್ದರು. ತಮ್ಮ ಕಡು ವೈರಿ, ಮಾಜಿ ಪ್ರಧಾನಿ ದೇವೇಗೌಡರ ಒತ್ತಡಕ್ಕೆ ಮಣಿದದ್ದು ಅವರ ಮುಖಭಂಗಕ್ಕೆ ಕಾರಣವಾಗಿತ್ತು . ಪೊಲೀಸರು ವರ್ಗ ಆದೇಶ ರದ್ದಿಗೆ ಪುಟ್ಟಸ್ವಾಮಿಗೌಡ ಹಾಗೂ ಹಿರಿಯ ಸಚಿವ ಎಚ್.ಸಿ.ಶ್ರೀಕಂಠಯ್ಯ ಶತಾಯಗತಾಯ ಪ್ರಯತ್ನಿಸಿದ್ದರು.
ಪುಟ್ಟಸ್ವಾಮಿಗೌಡರು ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆಯಿಂದ ಠಿಕಾಣಿ ಹೂಡಿ ಕೃಷ್ಣ ಅವರ ಮೇಲೆ ಇನ್ನಿಲ್ಲದ ಒತ್ತಡ ತಂದರು. ಆದರೆ, ಮಂಗಳವಾರ ಸಂಜೆ ಎಸ್ಪಿ ವರ್ಗಾವಣೆ ಕುರಿತ ಅಧಿಕೃತ ಆದೇಶ ಹೊರಬೀಳುತ್ತಿದ್ದಂತೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಸೋನಿಯಾಗಾಂಧಿ ಅವರಿಗೆ ರವಾನಿಸಿದರು ಎಂದು ತಿಳಿದುಬಂದಿದೆ.
ಎಸ್ಪಿ ವರ್ಗಾವಣೆ ಆದೇಶದ ಹಿನ್ನೆಲೆಯಲ್ಲಿ ದೇವೇಗೌಡರು ಇಂದು ನಡೆಸಬೇಕಿದ್ದ ಪ್ರತಿಭಟನೆಯನ್ನು ಮುಂದಕ್ಕೆ ಹಾಕಿದ್ದಾರೆ. ಆದರೆ ಎಸ್ಪಿ ವರ್ಗ ವಿರೋಧಿಸಿ ಪುಟ್ಟಸ್ವಾಮಿಗೌಡ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇದರಿಂದ ಮುಖ್ಯಮಂತ್ರಿ ಕೃಷ್ಣ ಇಕ್ಕಟ್ಟಿಗೆ ಸಿಲುಕಿದ್ದು , ಒಟ್ಟಾರೆ ಗೌಡರ ಗದ್ದಲ ತಾರಕ ಮುಟ್ಟಿದೆ.
ಧರಣಿ ಮುಂದಕ್ಕೆ : ಮುಖ್ಯಮಂತ್ರಿ ಕೃಷ್ಣ ನಿವಾಸದ ಬಳಿ ಮಂಗಳವಾರ ನಡೆಸಲು ಉದ್ದೇಶಿಸಿದ್ದ ಧರಣಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮುಂದೂಡಿದ್ದಾರೆ.
ಹಾಸನ ಎಸ್ಪಿ ವರ್ಗಾವಣೆ ಆದೇಶ ಸೋಮವಾರ ರಾತ್ರಿ ಹೊರಬಿದ್ದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಮಂಗಳವಾರ ಬೆಳಗ್ಗೆ ಚರ್ಚಿಸಿದ ಗೌಡರು, ಧರಣಿ ಮುಂದೂಡಿರುವುದಾಗಿ ತಿಳಿಸಿದರು. ಎಸ್ಪಿ ಅಮಾನತಿಗೆ ಒತ್ತಾಯಿಸಿರಲಿಲ್ಲ . ವಿಚಾರಣೆ ನಡೆಸುವಾಗ ಆರೋಪಕ್ಕೆ ಗುರಿಯಾಗಿರುವ ಎಸ್ಪಿ ಅಧಿಕಾರದಲ್ಲಿರಬಾರದೆಂಬುದು ನನ್ನ ಅಭಿಪ್ರಾಯ ಎಂದರು.
(ಸ್ನೇಹಸೇತು : ವಿಜಯ ಕರ್ನಾಟಕ)
ಮುಖಪುಟ / ವಾರ್ತೆಗಳು












Click it and Unblock the Notifications