ಉಡುಪಿ ಸಂಸದ ವಿನಯಕುಮಾರ ಸೊರಕೆ ಮಾತನಾಡುತ್ತಿದ್ದಾರೆ...
ಉಡುಪಿ ಸಂಸದ ವಿನಯಕುಮಾರ ಸೊರಕೆ ಮಾತನಾಡುತ್ತಿದ್ದಾರೆ...
ಜನ ಸ್ಪಂದನ ಮಾದರಿಯಲ್ಲಿ ಅಕ್ಟೋಬರ್ 27ರಿಂದ ಸೊರಕೆ ನೇತೃತ್ವದಲ್ಲಿ ಕ್ರಾಂತಿಯಾತ್ರೆ
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟ- ಕೇಂದ್ರ ಸರ್ಕಾರದ ಆಡಳಿತ ವೈಖರಿಯ ಕುರಿತು ಸೊರಕೆಯವರಿಗೆ ಅಸಮಾಧಾನ. ರಾಜ್ಯದ ಜನತೆಗೆ ನೀಡಿದ್ದ ಆಶ್ವಾಸನೆಗಳನ್ನು ಕೇಂದ್ರ ಸರ್ಕಾರ ಗಾಳಿಗೆ ತೂರಿದೆ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೊರಕೆ ದೂರಿದರು.
ಕಾಂಗ್ರೆಸ್ಸಿಗ ಸೊರಕೆಯವರ ದೂರುಗಳು ಮುಖ್ಯವಾಗಿ ಮೂರು. ಮೊದಲನೆಯದು ಕೇಂದ್ರ ಸರ್ಕಾರ ರಾಜ್ಯದ ಬರ ಪರಿಹಾರ ಕಾಮಗಾರಿಗೆ ಸೂಕ್ತ ನೆರವು ನೀಡುತ್ತಿಲ್ಲ ಎನ್ನುವುದು. ಮೀನುಗಾರರ ಸಮುದಾಯ ಹಾಗೂ ಬೀಡಿ ಕಾರ್ಮಿಕರಿಗೆ ಪ್ಯಾಕೇಜ್ ಒದಗಿಸದಿರುವುದು ಇನ್ನೆರಡು ದೂರುಗಳು.
ಉಡುಪಿಯನ್ನು ಪ್ರತ್ಯೇಕ ಟೆಲಿಕಾಂ ಜಿಲ್ಲೆಯನ್ನಾಗಿ ರೂಪಿಸುವ ಕೇಂದ್ರ ಸರ್ಕಾರದ ನೀತಿಯ ಕುರಿತೂ ವಿನಯಕುಮಾರ ಸೊರಕೆ ವಿರೋಧ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವೇನಾದರೂ ಉಡುಪಿಯನ್ನು ಟೆಲಿಕಾಂ ಜಿಲ್ಲೆಯಾಗಿ ರೂಪಿಸಲು ಮುಂದಾದರೆ, ಕಾಂಗ್ರೆಸ್ ಪಕ್ಷ ಉಗ್ರವಾಗಿ ಪ್ರತಿಭಟಿಸುತ್ತದೆಂದು ಎಚ್ಚರಿಕೆಯನ್ನೂ ನೀಡಿದರು.
ಕೇಂದ್ರದಿಂದ ರಾಜ್ಯದತ್ತ ಬಂದರೆ- ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ನಾಲ್ಕು ವರ್ಷಗಳ ಆಳ್ವಿಕೆಯ ಕುರಿತು ಸೊರಕೆಯವರಿಗೆ ತೃಪ್ತಿಯಿದೆ. ಕೃಷ್ಣ ಸರ್ಕಾರದ 4 ವರ್ಷದ ಸಾಧನೆಗಳನ್ನು ಜನರಿಗೆ ತಲುಪಿಸಲೋಸುಗ ಶಿರೂರಿನಿಂದ ಉಡುಪಿಯವರೆಗೆ ಕ್ರಾಂತಿ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಸೊರಕೆ ತಿಳಿಸಿದರು. ಈ ಕ್ರಾಂತಿ ಯಾತ್ರೆ ಅಕ್ಟೋಬರ್ 27ರಿಂದ 31 ರವರೆಗೆ ನಡೆಯಲಿದೆ.
ಅ.31 ರಂದು ಬೃಹತ್ ಸಾರ್ವಜನಿಕ ಸಭೆ ನಡೆಸಿ ಪಾಂಚಜನ್ಯ ಊದುವುದು ಸೊರಕೆಯವರ ಉದ್ದೇಶ. ಲೋಕಸಭೆ ಚುನಾವಣೆಗಳು ಹತ್ತಿರದಲ್ಲಿವೆ, ಅಲ್ಲವೇ ?
(ಪಿಟಿಐ/ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications