ಬೆಂಗಳೂರಲ್ಲಿ ಜರ್ಮನಿಯ ಅಂಗಡಿ ‘ಮೆಟ್ರೋ’ ಕಾರ್ಯಾರಂಭ
ಬೆಂಗಳೂರಲ್ಲಿ ಜರ್ಮನಿಯ ಅಂಗಡಿ ‘ಮೆಟ್ರೋ’ ಕಾರ್ಯಾರಂಭ
ವ್ಯಾಪಾರದಲ್ಲಿ ಕೋಲಾಹಲ, ಬೆಂಗಳೂರು ಮಾರಾಟಗಾರರ ವಿರೋಧ
ಯಶವಂತಪುರದ ಎಪಿಎಂಸಿ ಯಾರ್ಡ್‌ನಿಂದ ಕೇವಲ ಅರ್ಧ ಕಿಲೋ ಮೀಟರಿನಷ್ಟು ದೂರದಲ್ಲಿ ತಲೆಯೆತ್ತಿರುವ ಈ ಮಳಿಗೆ ನಿಷೇಧಿತ ಸಗಟು ಮಾರಾಟವನ್ನು ಹಿಂದಿನ ಬಾಗಿಲಿನಿಂದ ನಡೆಸುವ ತಂತ್ರವನ್ನು ಹೂಡಿದೆ ಎಂದು ಬೆಂಗಳೂರು ಚಿಲ್ಲರೆ ಮಾರಾಟಗಾರರು ಪ್ರತಿಭಟಿಸಿದರು. ಮೊದಲೇ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದ ಜರ್ಮನಿಯ ಮೆಟ್ರೋ ಗ್ರೂಪ್ ಮಳಿಗೆಯ ಉದ್ಘಾಟನೆಯನ್ನು ಸಾಂಗವಾಗಿ ನೆರವೇರಿಸಿತು.
ಒಂದು ಸಣ್ಣ ಸೂಜಿಯಿಂದ ಹಿಡಿದು ದೊಡ್ಡ ಕಾರಿನವರೆಗೆ ಸಕಲವೂ ಇಲ್ಲಿ ಸಿಗುತ್ತದೆ ಎಂಬುದು ಆಕರ್ಷಣೆ. ಸದ್ಯಕ್ಕೆ ಅಂಗಡಿ ಸಾಮಾನ್ಯ ಮಂದಿಗೆ ಕೈಬೀಸುತ್ತಿಲ್ಲ. ಇಲ್ಲೇನಿದ್ದರೂ ನೋಂದಾಯಿಸಿಕೊಂಡು, ದುಡ್ಡು ಕೊಟ್ಟು ಖರೀದಿ (ಕ್ಯಾಷ್ ಅಂಡ್ ಕ್ಯಾರಿ) ಮಾಡುವ ಮಧ್ಯಮ ಹಾಗೂ ದೊಡ್ಡ ಸಗಟು ವ್ಯಾಪಾರಿಗಳಿಗೆ ಸ್ವಾಗತ.
ಮೆಟ್ರೋ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಡಾ. ಹನ್ಸ್- ಜೋಕಿಮ್ ಕೊಯೆರ್ಬರ್ ಸುದ್ದಿಗಾರರ ಜೊತೆ ಮಾತಾಡಿ, ಈ ಮಳಿಗೆ ಸಗಟು ಮಾರಾಟ ಮಾಡುವ ಸಂಸ್ಥೆಯಲ್ಲ. ಬದಲಿಗೆ ಚಿಲ್ಲರೆ ಮಾರಾಟಗಾರರು ಮಾರುಕಟ್ಟೆಯಲ್ಲಿ ಇನ್ನೂ ಜೋರಾಗಿ ಬೆಳೆಯುವಂಥಾ ಆರೋಗ್ಯಕರ ಸ್ಪರ್ಧೆ ಹುಟ್ಟುಹಾಕುವ ಮಳಿಗೆ ಎಂದು ಸ್ಪಷ್ಟಪಡಿಸಿದರು. ಸದ್ಯದಲ್ಲೇ ಕನಕಪುರ ರಸ್ತೆಯಲ್ಲಿ ಇಂಥದೇ ಇನ್ನೊಂದು ಮಳಿಗೆ ತಲೆಯೆತ್ತಲಿದೆ. ಎರಡೂ ಅಂಗಡಿಗಳ ಮೇಲೆ 176 ಕೋಟಿ ರುಪಾಯಿಗಳ ಭಾರೀ ಬಂಡವಾಳ ಹೂಡಲಾಗಿದ್ದು, ಒಟ್ಟು 750 ಮಂದಿಗೆ ಉದ್ಯೋಗಾವಕಾಶ ಸಿಕ್ಕಿದೆ ಎಂದರು.
ಹಣ ಪಡೆದು ಮಾರುವ ನಮ್ಮ ಮಳಿಗೆಯಿಂದ ದಲ್ಲಾಳಿಗಳ ಸಂಖ್ಯೆ ಕ್ಷೀಣಿಸುವ ಆತಂಕ ಅನೇಕರಲ್ಲಿದೆ. ಇದು ನಿಜವೂ ಹೌದು. ಅದಕ್ಕೇ ತಗಾದೆಗಳು ಬರುತ್ತಿವೆ. ಆದರೆ, ಸ್ಥಳೀಯ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಇಂತಹ ಮಳಿಗೆಯನ್ನು ಜನರು ಸ್ವಾಗತಿಸಬೇಕು ಎಂದು ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ ಇಂಡಿಯಾದ ಪ್ರಾದೇಶಿಕ ಮ್ಯಾನೇಜರ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಹರ್ಷ್ ಬಹಾದುರ್ ಹೇಳಿದರು.
‘ಇದು ಈಸ್ಟ್ ಇಂಡಿಯಾ ಕಂಪನಿ ಥರ’ : ಆದರೆ ದೇಶೀ ಮಾರಾಟಗಾರರು ಈ ಮಳಿಗೆಯನ್ನು ಧಿಕ್ಕರಿಸಿದ್ದಾರೆ. ಸರ್ಕಾರದ ಕಣ್ಣಿಗೆ ಮಣ್ಣೆರಚಿ ನಿಷೇಧಿತ ಮಾರಾಟದ ಕೆಲಸವನ್ನು ಜರ್ಮನಿಯ ಸಂಸ್ಥೆ ಮಾಡಲು ಮುಂದೆ ಬಂದಿದೆ. ಇದರದ್ದು ಈಸ್ಟ್ ಇಂಡಿಯಾ ಕಂಪನಿಯ ತಂತ್ರ. ಸರ್ಕಾರ ನಿರ್ಲಕ್ಷಿಸಿದರೆ ದಂಡ ತೆರಬೇಕಾದೀತು ಎಂದು ಬೆಂಗಳೂರು ಚಿಲ್ಲರೆ ಅಂಗಡಿಗಳ ವ್ಯಾಪಾರಿಗಳು ಎಚ್ಚರಿಸಿದ್ದಾರೆ. ಕೆಲವು ಮಾರಾಟಗಾರರು ಮಳಿಗೆ ಮುಂದೆ ಪ್ರತಿಭಟನೆಯನ್ನೂ ನಡೆಸಿದರು.
ಮೆಟ್ರೋದಲ್ಲಿ ಅಕ್ರಮ ಹಣ್ಣು- ತರಕಾರಿ ಮಾರಾಟ : ದೇಶೀ ಮಾರಾಟದಾರರ ಪ್ರಕಾರ, ಭಾರತದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆ ಬಹುರಾಷ್ಟ್ರೀಯ ಕಂಪನಿಗಳಿಗೆ ಕೇವಲ ‘ಕ್ಯಾಷ್ ಅಂಡ್ ಕ್ಯಾರಿ’ ವ್ಯವಹಾರ ನಡೆಸಲು ಮಾತ್ರ ಅನುಮತಿ ಕೊಡುತ್ತದೆ. ಸಗಟು ಅಥವಾ ಬೆಲೆ ಕಡಿತದ ಮಾರಾಟಕ್ಕೆ ಅನುಮತಿ ಇಲ್ಲ. ಜೊತೆಗೆ ಮೆಟ್ರೋದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನೂ ಮಾರಾಟಕ್ಕೆ ಇಡಲಾಗಿದೆ. ಆದರೆ ಎಪಿಎಂಸಿ ಕಾಯ್ದೆಯಂತೆ ವಿದೇಶೀ ಕಂಪನಿಗಳು ತರಕಾರಿ ಹಾಗೂ ಹಣ್ಣುಗಳನ್ನು ಮಾರುವಂತಿಲ್ಲ ಎಂಬುದು ಬೆಂಗಳೂರು ಸಗಟು ಮಾರಾಟಗಾರರ ತಗಾದೆ.
ಕೃಷಿ ಉತ್ಪನ್ನಗಳನ್ನು ಮಾರಲು ಎಫ್‌ಐಪಿಬಿ ಅನುಮತಿ ಕೊಟ್ಟಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜೊತೆ ಮೆಟ್ರೋ ಚರ್ಚಿಸುತ್ತಿದೆ ಎಂದು ತಗಾದೆ ಬಗ್ಗೆ ಬಹಾದುರ್ ಪ್ರತಿಕ್ರಿಯಿಸಿದರು.
(ಪಿಟಿಐ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications