ಏರಿಸಿ ಹಾರಿಸಿ ಮರೆತ ಬಾವುಟಗಳ ಇಳಿಸುತ್ತಿರುವ ಹೊಸಮನಿ
ಏರಿಸಿ ಹಾರಿಸಿ ಮರೆತ ಬಾವುಟಗಳ ಇಳಿಸುತ್ತಿರುವ ಹೊಸಮನಿ
ಈವರೆಗೆ ಇಂಥಾ 72 ಬಾವುಟಗಳು ಹೊಸಮನಿ ಮತ್ತು ಸ್ನೇಹಿತರಿಗೆ ಸಿಕ್ಕಿವೆ
- ಎಂ.ವಿನೋದಿನಿ
ಸಮರ್ಪಣ ಎಂಬೊಂದು ಟ್ರಸ್ಟು. ಇದರಲ್ಲಿ ಕೆಲಸ ಮಾಡುವ ಶಿವಕುಮಾರ್ ಹೊಸಮನಿ ಎಂಬ ಸಮಾಜ ಸೇವಕ. ಕಳೆದೊಂದು ತಿಂಗಳಿಂದ ಈತ ಹಾಗೂ ಕೆಲವು ಸ್ನೇಹಿತರು ಏರಿಸಿ ಹಾರಿಸಿ ಮರೆತ ಬಾವುಟಗಳನ್ನು ಸಂಗ್ರಹಿಸುವ ಕಾಯಕದಲ್ಲಿ ತೊಡಗಿದ್ದಾರೆ. ಆಟೋಗಳ ಮೇಲೆ ಹಾರಿಸಿ ಮರೆತ ಪ್ಲಾಸ್ಟಿಕ್ ಬಾವುಟದಿಂದ ಹಿಡಿದು ಯಾವುದೋ ಹೊಟೇಲಿನ ಮೇಲೆ ಅವರೋಹಣಗೊಳ್ಳದೆಯೇ ಹರಿದು ಹೋಗಿರುವ ಬಾವುಟದತನಕ ಈವರೆಗೆ 72 ರಾಷ್ಟ್ರಧ್ವಜಗಳನ್ನು ಹೊಸಮನಿ ಸಂಗ್ರಹಿಸಿದ್ದಾರೆ.
ಹೊಸಮನಿ ಹೀಗೇಕೆ ಮಾಡಿದರು?
ಅವತ್ತೊಂದು ದಿನ ರಾಜಾಜಿನಗರದ ತಮ್ಮ ಮನೆಯ ಮುಂದೆ ಒಂದು ಆಟೋ ನಿಂತಿತ್ತು. ಅದರ ಮೇಲೆ ಕೊಳೆಯಾಗಿ, ಹರಿದ ಭಾರತದ ಬಾವುಟ ಅಳುತ್ತಿತ್ತು. ಹೊಸಮನಿ ಕೈಲಿ ನೋಡೋಕಾಗಲಿಲ್ಲ. ಆಟೋದನವ ಹತ್ತಿರ ಹೋಗಿ, ಅದನ್ನು ಇಳಿಸುವಂತೆ ವಿನಂತಿಸಿದರು. ಈ ಬಾವುಟವನ್ನು ಹೆಚ್ಚೂಕಮ್ಮಿ ಮರೆತಿದ್ದ ಆಟೋದವನಿಗೆ ಮುಖಭಂಗವಾಗಕೂಡದೆಂಬ ಒಣ ಪ್ರತಿಷ್ಠೆ. ‘ತೆಗೆಯಲ್ಲ ಅಂದಮೇಲೆ ತೆಗೆಯಲ್ಲ. ಏನು ಮಾಡಿಕೋತೀಯೋ ಮಾಡ್ಕೋ’ ಅಂತ ಸವಾಲೆಸೆದ. ಹೊಸಮನಿ ಆ ಸವಾಲನ್ನು ಸ್ವೀಕರಿಸಿದರು. ಗೆಳೆಯರ ತಂಡ ಕಟ್ಟಿಕೊಂಡು ಬಂದು, ಆ ಆಟೋದಿಂದ ಕೊನೆಗೂ ಹರಿದ ಬಾವುಟ ಇಳಿಸಿದರು. ಮುಂದೆ ಈ ಕೆಲಸವೇ ಗಂಭೀರವಾಯಿತು.
ನಮ್ಮ ಜನರಿಗೆ ರಾಷ್ಟ್ರಧ್ವಜವನ್ನು ಸೂರ್ಯ ಹುಟ್ಟಿದ ಮೇಲೆ ಹಾರಿಸಬೇಕು. ಮುಳುಗುವ ಮುನ್ನ ಇಳಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ. ಸುಖಾಸುಮ್ಮನೆ ಧ್ವಜಗಳನ್ನು ಎಲ್ಲೆಂದರಲ್ಲಿ ಸಿಕ್ಕಿಸಿ, ಮರೆತು, ಅದಕ್ಕೆ ಅವಮಾನ ಮಾಡುವುದರ ಬದಲು ಸುಮ್ಮನಿರುವ ಮನಸ್ಸನ್ನಾದರೂ ಮಾಡಲಿ. ಪ್ಲಾಸ್ಟಿಕ್ ಬಾವುಟಗಳ ಆವುಟ ಪರಿಸರವನ್ನು ಹಾಳು ಮಾಡುವ ಹೊಸ ಸಮಸ್ಯೆಯೂ ಮುಂದೆ ತಲೆದೋರುವ ಅಪಾಯವಿದೆ. ಸರ್ಕಾರದವರಿಗೆ ಈ ಬಗ್ಗೆ ಎಷ್ಟು ಹೇಳಿದರೂ ಗೋರ್ಕಲ್ಲ ಮೇಲೆ ಮಳೆ ಸುರಿಸಿದಂತಾಗುತ್ತಿದೆ ಎಂದು ಹೊಸಮನಿ ಅಲವತ್ತುಕೊಳ್ಳುತ್ತಾರೆ.
ಬಾವುಟಗಳನ್ನೇನೋ ಇಳಿಸಿದ್ದಾಗಿದೆ, ಅವನ್ನೇನು ಮಾಡೋದು?
ಈ ಪ್ರಶ್ನೆಗೆ ಹೊಸಮನಿ ಅವರ ಹತ್ತಿರವೂ ಉತ್ತರವಿಲ್ಲ. ಪೊಲೀಸ್ ಕಮಿಷನರ್ ಮರಿಸ್ವಾಮಿಗೆ ಈ ವಿಷಯವಾಗಿ ಪತ್ರವೊಂದನ್ನು ಬರೆದಿದ್ದಾರೆ. ಎರಡು ಆಟೋದಲ್ಲಿ ತುಂಬುವಷ್ಟು ಪ್ಲಾಸ್ಟಿಕ್ ಬಾವುಟಗಳಿವೆ. ಒಂದಷ್ಟು ಹಾಳಾದ ಬಟ್ಟೆಯ ಬಾವುಟಗಳು. ಇವಕ್ಕೆ ಒಂದು ದಾರಿ ತೋರಿಸಿ ಅಂತ ಹೊಸಮನಿ ಬರೆದಿರುವ ಪತ್ರಕ್ಕೆ ಉತ್ತರಿಸುವ ಶ್ರಮವನ್ನು ಪೊಲೀಸರು ತೆಗೆದುಕೊಂಡಿಲ್ಲ. ಪ್ಲಾಸ್ಟಿಕ್ ಬಾವುಟಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೊಡಲು ಹೊಸಮನಿ ನಿರ್ಧರಿಸಿದ್ದಾರೆ.
ಅಂದಹಾಗೆ, ಹೊಸಮನಿ ಸಂಗ್ರಹಿಸಿರುವ ಬಾವುಟಗಳ ಪೈಕಿ ಒಂದು ಶಿವಾಜಿನಗರ ಪೊಲೀಸ್ ಠಾಣೆಯ ಮೇಲೆ ಹಾರುತ್ತಿತ್ತು !
ಮುಖಪುಟ / ವಾಟ್ಸ್ ಹಾಟ್












Click it and Unblock the Notifications