ಬೆಂಗಳೂರಿನ ಡೆಂಗೆ ಗಾಯಕ್ಕೆ ಕಾಲರಾ ಬರೆ : ಇಬ್ಬರು ಬಲಿ
ಬೆಂಗಳೂರಿನ ಡೆಂಗೆ ಗಾಯಕ್ಕೆ ಕಾಲರಾ ಬರೆ : ಇಬ್ಬರು ಬಲಿ
ಆಸ್ಪತ್ರೆಗೆ ಸೇರಿ ಕಾಲರಾ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 26
ನಗರದ ಕೆ.ಸಿ.ಜನರಲ್, ಐಸೋಲೇಷನ್ ಮೊದಲಾದ ಸರ್ಕಾರಿ ಆಸ್ಪತ್ರೆಗಳ ಕಡತಗಳ ಪ್ರಕಾರ ಈವರೆಗೆ ಸುಮಾರು 26 ಮಂದಿಗೆ ಕಾಲರಾ ರೋಗದ ಲಕ್ಷಣಗಳು ಕಾಣಿಸಿವೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಮರ್ಪಕವಾಗಿ ನೀರು ಹರಿದು ಹೋಗದ ಜಾಗೆಗಳಲ್ಲಿ ರೋಗಾಣುಗಳು ಹುಟ್ಟಿಕೊಂಡಿವೆ. ಜೊತೆಗೆ ಮಳೆ ಹನಿಗಳಿಂದ ಮೇಲೇಳುವ ರೋಗಾಣುಗಳು ರಸ್ತೆ ಬದಿಯಲ್ಲಿ ಮಾರುವ ತಿನಿಸುಗಳ ಮೇಲೆ ಕೂರುತ್ತವೆ. ಇದನ್ನು ತಿಂದವರು ಕೂಡ ರೋಗಕ್ಕೆ ತುತ್ತಾಗುವ ಅಪಾಯವಿದೆ ಎನ್ನುತ್ತಾರೆ ವೈದ್ಯರು.
ವೈಯಾಲಿಕಾವಲ್‌ನ ಮೋಹನ್ (26) ಹಾಗೂ ಸುಲೋಚನ (42) ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕಾಲರಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಇಬ್ಬರೂ ಮೃತಪಟ್ಟಿದ್ದಾರೆ. ಆ್ಯಂಬ್ಯುಲೆನ್ಸ್‌ನಲ್ಲಿ ವೈಯಾಲಿ ಕಾವಲ್‌ಗೆ ತೆರಳಿದ ವೈದ್ಯರ ತಂಡ, ಅಲ್ಲಿನ ಜನರಿಗೆ ನೀರನ್ನು ಕುದಿಸಿ ಕುಡಿಯುವಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಮಹಾಪೌರ ಸಿ.ಎಂ.ನಾಗರಾಜ್ ನಗರದ ಜನ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಯಾವುದೇ ಜ್ವರ ಕಾಣಿಸಿಕೊಂಡರೂ ತಕ್ಷಣವೇ ವೈದ್ಯಾಧಿಕಾರಿಗಳನ್ನು ಕಾಣಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲರಾ ಮತ್ತು ಡೆಂಗೆ ರೋಗ ನಿವಾರಣೆಗೆ ಅಗತ್ಯವಿರುವ ಔಷಧಿಗಳನ್ನು ಸಮರ್ಪಕ ರೀತಿಯಲ್ಲಿ ಪೂರೈಸುವಂತೆ ಮೇಯರ್ ಆದೇಶಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications