ಎಸ್ಸೆಂ ಕೃಷ್ಣ ಮತ್ತು ಸಚಿವರ ವಿರುದ್ಧ ಜಾಫರ್ ಷರೀಫ್ ಮಾತುಕತ್ತಿ
ಎಸ್ಸೆಂ ಕೃಷ್ಣ ಮತ್ತು ಸಚಿವರ ವಿರುದ್ಧ ಜಾಫರ್ ಷರೀಫ್ ಮಾತುಕತ್ತಿ
‘ಚುನಾವಣೆ ನಾಯಕತ್ವ ತೀರ್ಮಾನಿಸುವುದು ಕೃಷ್ಣ ಅಥವಾ ಧರ್ಮಸಿಂಗ್ ಅಲ್ಲ’
ಕರ್ನಾಟಕ ಅಲ್ಪ ಸಂಖ್ಯಾತರ ಇಲಾಖೆ ಹಾಗೂ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಂಟಿಯಾಗಿ ಏರ್ಪಡಿಸಿದ್ದ ಆಟೋರಿಕ್ಷಾ ಮತ್ತಿತರ ಸಾಲ ಸೌಲಭ್ಯ ವಿತರಣಾ ಸಭೆಯಲ್ಲಿ ಷರೀಫ್ ಸೋಮವಾರ (ಅ.13) ಮಾತಾಡಿದರು.
ನಿಗದಿಯಾಗಿದ್ದಂತೆ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕೋಪಯೋಗಿ ಸಚಿವ ಧರ್ಮಸಿಂಗ್ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ಅವರು ‘ಜನಸ್ಪಂದನ ಯಾತ್ರೆ’ಯ ಸುಸ್ತಿನ ಕಾರಣ ಸಭೆಗೆ ಗೈರು ಹಾಜರಾದರು. ಇದನ್ನು ಕೂಡ ಷರೀಫ್ ಕಟು ಮಾತುಗಳಲ್ಲಿ ಟೀಕಿಸಿದರು. ವೋಟು ಕೊಟ್ಟು ಗೆಲ್ಲಿಸುವುದು ಇಲ್ಲಿ ನೆರೆದಿರುವ ಜನ. ಅಲ್ಪಸಂಖ್ಯಾತರ ಈ ಸಮಾರಂಭಕ್ಕೆ ಕೃಷ್ಣ ಹಾಜರಾಗಲೇಬೇಕಿತ್ತು. ಇಲ್ಲವಾದರೆ, ಮೊದಲೇ ಒಪ್ಪಿಕೊಳ್ಳಲಾಗದು ಎಂದು ಹೇಳಬೇಕಿತ್ತು. ಕೃಷ್ಣ ಅವರಷ್ಟೇ ಅಲ್ಲದೆ ಖರ್ಗೆ, ಧರ್ಮಸಿಂಗ್ ಕೂಡ ದಣಿದಿದ್ದಾರೆ ಪಾಪ ಎಂದು ಷರೀಫ್ ವ್ಯಂಗ್ಯವಾಡಿದರು.
ಮುಂದಿನ ಲೋಕಸಭಾ ಚುನಾವಣೆಯ ನಾಯಕತ್ವ ಯಾರು ವಹಿಸಬೇಕು ಎಂಬುದನ್ನು ಹೈಕಮ್ಯಾಂಡ್ ತೀರ್ಮಾನಿಸುತ್ತದೆ, ಜನ ತೀರ್ಮಾನಿಸುತ್ತಾರೆ. ಧರ್ಮಸಿಂಗ್ ಅಲ್ಲ. ಇದನ್ನು ಸಮರ್ಥಿಸುವ ಕೃಷ್ಣ ಕೂಡ ಅಲ್ಲ ಎಂದು ನೇರವಾಗಿ ಷರೀಫ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಜನಸ್ಪಂದನ ಯಾತ್ರೆಗೆ ಕೃಷ್ಣ ಜೊತೆಯಲ್ಲಿ ಸಚಿವರ ದಂಡು ತೆರಳಿದ್ದನ್ನೂ ಅವರು ವಿರೋಧಿಸಿದರು.
ವಾಜಪೇಯಿ ಕೂಡ ಸರಿಯಿಲ್ಲ : ಅಕ್ಟೋಬರ್ 17ನೇ ತಾರೀಕು ನಡೆಯಲಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಮೂಹ ಜನ ಜಾಗೃತಿ ಕಾರ್ಯಕ್ರಮದ ಮೇಲೆ ಭರವಸೆ ಇಡಿ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿರುವುದು ಸರಿಯಲ್ಲ. ವಿಎಚ್‌ಪಿ, ಭಜರಂಗದಳದಲ್ಲಿ ವಿಶ್ವಾಸವಿದೆ ಎಂದು ಹೇಳುವ ಮೂಲಕ ಅವರು ತಮ್ಮ ಹಳೆ ಚಾಳಿ ತೋರುತ್ತಿದ್ದಾರೆ. ದೇಶ ಯಾರಪ್ಪನದೂ ಅಲ್ಲ, ಅಗತ್ಯ ಬಿದ್ದರೆ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಹೋರಾಡಲು ಸಿದ್ಧ ಎಂದು ಷರೀಫ್ ಆವೇಶಭರಿತ ಮಾತುಗಳನ್ನಾಡಿದರು.
ಲೋಕಸಭಾ ಸದಸ್ಯೆ ಮಾರ್ಗರೇಟ್ ಆಳ್ವ, ಸಚಿವರಾದ ಸಗೀರ್ ಹ್ಮದ್, ಖಮರುಲ್ ಇಸ್ಲಾಂ, ಟಿ.ಜಾನ್, ನಫೀಸಾ ಫಜಲ್ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications