ಪೊಲೀಸರಿಗೆ ಚಳ್ಳೆ : ವೀರಪ್ಪನ್‌ನಿಂದ ವ್ಯಾಪಾರಿ ಹಾಗೂ ದಿನಸಿ ಕೊಳ್ಳೆ
ಪೊಲೀಸರಿಗೆ ಚಳ್ಳೆ : ವೀರಪ್ಪನ್‌ನಿಂದ ವ್ಯಾಪಾರಿ ಹಾಗೂ ದಿನಸಿ ಕೊಳ್ಳೆ
ದಿನಸಿ ಜೊತೆಗೆ ವ್ಯಾಪಾರಿಯನ್ನೂ ವೀರಪ್ಪನ್ ಅಪಹರಿಸಿದ್ದಾನೆ
ವೀರಪ್ಪನ್ ಹಾಗೂ ಆತನ ಸಹಚರರು ಬುಧವಾರ (ಅ. 08) ಅರಣ್ಯ ಪ್ರದೇಶದಲ್ಲಿರುವ ಕತ್ರಿಪಟ್ಟಿ ಗ್ರಾಮದ ವ್ಯಾಪಾರಿ ಸೆಲ್ವಂ ಎಂಬಾತನನ್ನು ಅಕ್ಕಿ, ಬೇಳೆ ಮತ್ತಿತರ ದಿನಸಿ ಮೂಟೆಗಳ ಸಮೇತ ಅಪಹರಿಸಿದ್ದಾರೆಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊಟ್ಟೆಪಾಡಿಗೆ ವೀರಪ್ಪನ್ ಅನಿವಾರ್ಯವಾಗಿ ಈ ರೀತಿ ಮಾಡಬೇಕಾಗಿ ಬಂದಿರುವುದು ಸೆಲ್ವಂ ಅಪಹರಣದಿಂದ ಸ್ಪಷ್ಟವಾಗಿದೆ. ಮೂರು ದಿನಗಳ ನಂತರ ಸೆಲ್ವಂನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವುದಾಗಿ ಹೇಳಿರುವ ವೀರಪ್ಪನ್, ಪೊಲೀಸರಿಗೆ ಸುದ್ದಿ ಮುಟ್ಟಿಸಿದರೆ ಜೀವ ಉಳಿಯುವುದಿಲ್ಲ ಎಂಬ ಬೆದರಿಕೆಯನ್ನೂ ಹಾಕಿ ಹೋಗಿದ್ದಾನೆ.
ಈ ಘಟನೆಯ ನಂತರ ಕತ್ರಿಪಟ್ಟಿ ಗ್ರಾಮದ ಸುತ್ತಲೂ ಪೊಲೀಸರು ಜಮಾಯಿಸಿದ್ದರೂ, ವೀರಪ್ಪನ್ ಸುಳಿವು ಸಿಕ್ಕಿಲ್ಲ. ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆದು, ಇದ್ದಕ್ಕಿದ್ದಂತೆ ದಾಳಿಯಿಡುವುದು ವೀರಪ್ಪನ್ ಜಾಯಮಾನ. ಈ ಘಟನೆಯಲ್ಲೂ ಅದು ಮುಂದುವರೆದಿದೆ. ಸುಸಜ್ಜಿತ ಶಸ್ತ್ರಾಸ್ತ್ರಗಳಿರುವ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಟಿಎಫ್) ಯ ಕಾರ್ಯವೈಖರಿ ಮತ್ತೆ ಸವಾಲಿಗೆ ಸಿಕ್ಕಿದೆ. ಕಳೆದ ಕೆಲವು ವಾರಗಳಿಂದ ವೀರಪ್ಪನ್ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಆಧರಿಸಿ ಎಸ್‌ಟಿಫ್‌ನ ಬಹುತೇಕ ಪೊಲೀಸರು ಬೆಟ್ಟದಲ್ಲಿ ಜಮಾಯಿಸಿದ್ದರು. ಆದರೆ, ವೀರಪ್ಪನ್ ಸದ್ದು ಮಾಡಿದ್ದು ಇನ್ನೊಂದು ಗ್ರಾಮದಲ್ಲಿ.
ಕ್ಯಾಸೆಟ್ ರವಾನೆಯಾಗುತ್ತಿದೆ : ಎಸ್‌ಟಿಎಫ್ ನಡಾವಳಿಗಳ ಬಗ್ಗೆ ಮಾಹಿತಿಯನ್ನು ವೀರಪ್ಪನ್‌ಗೆ ಯಾರೋ ನಾಡಿನಿಂದ ಕ್ಯಾಸೆಟ್ ಮೂಲಕ ರವಾನಿಸುತ್ತಿದ್ದಾರೆ ಎಂಬ ಅನುಮಾನ ಕೂಡ ಪೊಲೀಸರಲ್ಲಿದೆ. ಕುಂಬಳಕಾಯಿ, ಸೌತೆಕಾಯಿ ಮೊದಲಾದ ತರಕಾರಿಗಳ ಒಳಗೆ ಕ್ಯಾಸೆಟ್ ಇಟ್ಟು ಜನ ವೀರಪ್ಪನ್‌ಗೆ ಮಾಹಿತಿ ಸಾಗಿಸುತ್ತಿದ್ದಾರೆ ಎಂಬುದು ಪೊಲೀಸರ ಅನುಮಾನ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್












Click it and Unblock the Notifications