ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ‘ಜನ ಸ್ಪಂದನ’ ಜೋರೋ ಜೋರುಅರಿಶಿನಕುಂಟೆಯಲ್ಲಿ ಕಾರ್ಯಕ್ರಮ ಶುರು

By Staff
|
Google Oneindia Kannada News

ಕೃಷ್ಣ ‘ಜನ ಸ್ಪಂದನ’ ಜೋರೋ ಜೋರು
ಅರಿಶಿನಕುಂಟೆಯಲ್ಲಿ ಕಾರ್ಯಕ್ರಮ ಶುರು
ಹೊಟ್ಟೆ ತುಂಬಿದವರಿಗೆ ಬಿಸಿಯೂಟ ಅರ್ಥವಾಗಲ್ಲ
2004- ಬಜೆಟ್ಟಲ್ಲಿ ಪ್ಲೇವಿನ್‌ ಮರು ಪರಿಶೀಲನೆ
‘ಭೂಮಿ’ ಭ್ರಷ್ಟಾಚಾರ ನಿರ್ಮೂಲನೆಗೆ ನಾಂದಿ

  • ಎಸ್ಕೆ ಶಾಮಸುಂದರ, ಅರಿಶಿನಕುಂಟೆಯಿಂದ
ಮುಖ್ಯಮಂತ್ರಿ ಎಸ್ಸೆಂ ಕೃಷ್ಣರ ‘ಜನ ಸ್ಪಂದನ’ಬಸ್‌ ಯಾತ್ರೆ ಹಬ್ಬದ ವಾತಾವರಣದೊಂದಿಗೆ, ಜೈಕಾರಗಳ ಸಹಿತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರಿಶಿನಕುಂಟೆ ಗ್ರಾಮಸ್ಥರನ್ನು ಮುಖಾಮುಖಿಯಾಗುವುದರೊಂದಿಗೆ ಶುರುವಾಗಿದೆ.

ಬುಧವಾರ (ಅ. 08) ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ಹೊರಟ ಕೃಷ್ಣ ಹಾಗೂ ಸಚಿವರ ಬಸ್ಸು ಹಾದಿಯುದ್ದಕ್ಕೂ ಅಭಿಮಾನಿಗಳ ಹರ್ಷೋದ್ಗಾರಗಳ ನಡುವೆ ಸಾಗಿತು. ಮುಖ್ಯಮಂತ್ರಿಗೆ ಶುಭ ಕೋರಲು ದಾರಿಯುದ್ದಕ್ಕೂ ಕಾಂಗ್ರೆಸ್ಸಿಗರ ದಂಡು. 10.30 ಗಂಟೆಗೆ ಬೆಂಗಳೂರಿನಿಂದ 23 ಕಿಲೋ ಮೀಟರ್‌ ದೂರದಲ್ಲಿರುವ ನೆಲಮಂದಲ ತಾಲ್ಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ಕೃಷ್ಣ ‘ಜನ ಸ್ಪಂದನ’ ಕಾರ್ಯಕ್ರಮದ ಮೊದಲ ಅಡಿ ಇಟ್ಟರು.

ಮೊದಲು ಹಳ್ಳಿಯ ಆಂಜನೇಯ ದೇವಳದಲ್ಲಿ ಪೂಜೆ ಸಲ್ಲಿಸಿದ ಕೃಷ್ಣ ಆ ನಂತರ ಹಳ್ಳಿಯ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡಿದರು. ನಾಲ್ಕು ವರ್ಷ ತುಂಬಿರುವ ತಮ್ಮ ಸರ್ಕಾರ ಕೊಟ್ಟಿದ್ದ ಪ್ರಣಾಳಿಕೆ, ವಾಗ್ದಾನಗಳನ್ನು ಸಾಕಷ್ಟು ಈಡೇರಿಸಿದೆ. ಇನ್ನು ಒಂದು ವರ್ಷದಲ್ಲಿ ಜನರಿಗೆ ಏನು ಬೇಕು ಎಂದು ತಿಳಿದು, ಅವರ ಮಾರ್ಗದರ್ಶನದಲ್ಲಿ ನಡೆಯುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

ಹೊಟ್ಟೆ ತುಂಬಿದವರಿಗೆ ಬಿಸಿಯೂಟ ಅರ್ಥವಾಗೊಲ್ಲ : ಸರ್ಕಾರದ ಸಾಧನೆ ಹಾಗೂ ಕಾರ್ಯಕ್ರಮಗಳ ವಿಹಂಗಮ ನೋಟವನ್ನು ಮಾತುಗಳಲ್ಲಿ ಕಟ್ಟಿಕೊಟ್ಟ ಕೃಷ್ಣ, ಭ್ರಷ್ಟಾಚಾರ ತಡೆಯುವ ಉತ್ತಮ ಉದಾಹರಣೆ ‘ಭೂಮಿ’ ಯೋಜನೆಯಾಗಿದೆ ಎಂದರು. ಅಕ್ಟೋಬರ್‌ 31ನೇ ತಾರೀಕಿನೊಳಗೆ ಸಬ್‌ ರಿಜಿಸ್ಟ್ರಾರ್‌ ಕಚೇರಿ ಪೂರ್ಣ ಗಣಕೀಕೃತವಾಗುತ್ತದೆ ಎಂದು ಭರವಸೆ ಇತ್ತರು. ಸ್ತ್ರೀ ಶಕ್ತಿಯ ಪ್ರಯೋಜನಗಳನ್ನು ಬಿಡಿಸಿ ಹೇಳಿದ ಅವರು ಶಾಲಾ ಮಕ್ಕಳಿಗೆ ಪ್ರಾರಂಭಿಸಿರುವ ಬಿಸಿಯೂಟ ಯೋಜನೆಯನ್ನು ಸಮರ್ಥಿಸಿಕೊಂಡರು. ಹೊಟ್ಟೆ ತುಂಬಿದವರಿಗೆ ಈ ಯೋಜನೆ ಅರ್ಥವಾಗುವುದಿಲ್ಲ ಎಂದು ಅವರು ಮಾತಿನ ಚಾಟಿ ಬೀಸಿದ್ದಕ್ಕೆ ಅಭಿಮಾನಿಗಳಿಂದ ಜೋರು ಕರತಾಡನ.

ಬಜೆಟ್‌ 2004್ಜಲ್ಲಿ ಆನ್‌ಲೈನ್‌ ಲಾಟರಿ ಬಗ್ಗೆ ಮಹತ್ವದ ತೀರ್ಮಾನ : ಆನ್‌ಲೈನ್‌ ಲಾಟರಿಯ ಬಗೆಗಿನ ಆಕ್ಷೇಪ ಕುರಿತು ಮಾತಾಡಿದ ಕೃಷ್ಣ, ಜೂಜು ಮಹಾಭಾರತದ ಕಾಲದಿಂದಲೂ ಇದೆ. ಒಂದು ವೇಳೆ ಇದನ್ನು ನಿಲ್ಲಿಸಿದರೆ ಜನರ ಮನಸ್ಸು ಕಳ್ಳಭಟ್ಟಿ ಸೇವನೆ ಮೊದಲಾದ ಬೇರೆ ಚಟಗಳತ್ತ ವಾಲುತ್ತದೆ. ಆನ್‌ಲೈನ್‌ ಲಾಟರಿಯನ್ನು ಶುರು ಮಾಡಿದ ಉದ್ದೇಶ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರುಪಾಯಿ ಆದಾಯ ತರಬೇಕು ಎಂಬುದಾಗಿತ್ತು. ಆದರೆ, ಈ ವರ್ಷ ವಾಣಿಜ್ಯ ತೆರಿಗೆ ಇಲಾಖೆ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದು, 630 ಕೋಟಿ ರುಪಾಯಿ ಹೆಚ್ಚು ತೆರಿಗೆ ಸಂಗ್ರಹಿಸಿದೆ. ಹೀಗಾಗಿ ಮುಂದಿನ ವರ್ಷದ ಆಯವ್ಯಯ ಪತ್ರ ಮಂಡನೆಯಲ್ಲಿ ಆನ್‌ಲೈನ್‌ ಲಾಟರಿ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಇರಾದೆ ತೋಡಿಕೊಂಡರು.

ಕಾವೇರಿ ನೀರು ನಮಗೂ ಕೊಡಿ : ಸರ್ಕಾರಿ ಅಧಿಕಾರಿಗಳ ಸುಸಜ್ಜಿತ ತಂಡ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಲು ಕೌಂಟರ್‌ಗಳನ್ನೇ ತೆರೆದಿತ್ತು. ಮಹಿಳೆಯರಿಂದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವ್ಯಾಪಕ ದೂರುಗಳು ಹರಿದು ಬಂದರೆ, ಪ್ರಭಾವಿ ವ್ಯಕ್ತಿಗಳದ್ದು ಕಾವೇರಿ ನೀರನ್ನು ನೆಲಮಂಗಲದವರೆಗೆ ಹರಿಸಿ ಎಂಬ ಅಹವಾಲು. ‘ಕಾವೇರಿ ನೀರನ್ನು ಇಲ್ಲಿಯವರೆಗೆ ಹರಿಸಬೇಕಾದರೆ ಕಾಲುವೆ ತೋಡಬೇಕಾಗುತ್ತೆ. ಅದೊಂದು ದೊಡ್ಡ ಯೋಜನೆಯಾಗುತ್ತೆ. ಇವತ್ತು ನೆಲಮಂಗಲಕ್ಕೆ ಕಾವೇರಿ ನೀರು ಕೊಟ್ಟರೆ, ನಾಳೆ ಮಾಗಡಿಯವರು ನಮಗೂ ಕೊಡಿ ಅಂತಾರೆ. ಕಾವೇರಿಗೂ ಮಿತಿಯಿದೆ. ಅದನ್ನು ಎಷ್ಟು ಅಂತ ಹಿಂಡೋಕಾಗುತ್ತೆ’ ಎಂದು ಕೃಷ್ಣ ಸಮರ್ಪಕ ಉತ್ತರ ಕೊಟ್ಟರು.

ನೆಲಮಂಗಲ ಶಾಸಕ ಆಂಜನಮೂರ್ತಿ, ಮಾಗಡಿ ಶಾಸಕ ರೇವಣ್ಣ, ಸಿ.ಎಂ.ಲಿಂಗಪ್ಪ ಮೊದಲಾದ ಸ್ಥಳೀಯ ರಾಜಕೀಯ ಧುರೀಣರು ನೆಲಮಂಗಲದ ಬೇಡಿಕೆಗಳಿರುವ ಬಿನ್ನವತ್ತಳೆಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು. ಬೆಂಗಳೂರು- ಮುಂಬಯಿ ರಾಷ್ಟ್ರೀಯ ಹೆದ್ದಾರಿಯ ಸಂಚಾರಿ ಒತ್ತಡ ತಗ್ಗಿಸಲು ಫ್ಲೈಓವರ್‌ ನಿರ್ಮಾಣ, ನೆಲಮಂಗಲದಲ್ಲಿ ಚರಂಡಿ ವ್ಯವಸ್ಥೆ, ಆಯಕಟ್ಟಿನ ಜಾಗೆಗಳಲ್ಲಿ ಪೊಲೀಸ್‌ ಚೌಕಿಗಳ ನಿರ್ಮಾಣ, ಕುಡಿಯುವ ನೀರಿನ ತೊಂದರೆ ಮೊದಲಾದ ಜನರ ಸಮಸ್ಯೆಗಳನ್ನು ಪರಿಗಣಿಸುವುದಾಗಿ ಕೃಷ್ಣ ಭರವಸೆ ಕೊಟ್ಟರು.

ಸುಮಾರು 10 ಸಾವಿರ ಮಂದಿ ಕೃಷ್ಣ ಜೊತೆ ಮುಖಾಮುಖಿಯಾಗಲು ಸೇರಿದ್ದರು. ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌, ಲೋಕೋಪಯೋಗಿ ಸಚಿವ ಧರ್ಮಸಿಂಗ್‌, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ, ಜಲ ಸಂಪನ್ಮೂಲ ಖಾತೆ ಸಚಿವ ಎಚ್‌.ಕೆ.ಪಾಟೀಲ್‌, ಸಹಕಾರಿ ಸಚಿವ ಎಚ್‌.ವಿಶ್ವನಾಥ್‌, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಚಂದ್ರೇಗೌಡ, ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ, ಸಚಿವರಾದ ಸಗೀರ್‌ ಅಹಮದ್‌, ಕೋಳಿವಾಡ, ಕಾಗೋಡು ತಿಮ್ಮಪ್ಪ ಮೊದಲಾದವರು ಕೃಷ್ಣ ಬಸ್‌ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಅರಿಶಿನಕುಂಟೆ ನಂತರ ಬಸ್ಸು ತುಮಕೂರು ಬಳಿಯ ಬಟವಾಡಿಗೆ ಪ್ರಯಾಣ ಬೆಳೆಸಿತು.

ಬರುವ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಕೃಷ್ಣ ಅದಕ್ಕೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿರುವುದನ್ನು ‘ಜನ ಸ್ಪಂದನ’ ಸಾಬೀತು ಪಡಿಸುವಂತಿದೆ.

Post your views

ಇವನ್ನೂ ಓದಿ-
ಜನಮುಖಿ ಯಾತ್ರೆಗೆ ಕೃಷ್ಣ ತಯಾರಿ
ಕೃಷ್ಣ ಶಂಖ : ಅ.8 ರಿಂದ 11 ರವರೆಗೆ ಸಿಎಂ ಜನ ಸ್ಪಂದನ ಯಾತ್ರೆ

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X