ಬರುತ್ತಿದೆ ಪುರುಷರ ಸಂತಾನ ನಿರೋಧಕ ಮಾತ್ರೆ, ಚುಚ್ಚುಮದ್ದು !
ಬರುತ್ತಿದೆ ಪುರುಷರ ಸಂತಾನ ನಿರೋಧಕ ಮಾತ್ರೆ, ಚುಚ್ಚುಮದ್ದು !
ಸ್ತ್ರೀಯರಿಗೆ ನಿಶ್ಚಿಂತೆ, ಈಗ ಪುರುಷರ ಪಾಳಿ...
ಸಿಡ್ನಿಯ ಏನ್ಜಾಕ್ ರಿಸರ್ಚ್ ಇನ್ಸ್‌ಟಿಟ್ಯೂಟ್ ಸಿದ್ಧಪಡಿಸಿರುವ ಮಾತ್ರೆ ಹಾಗೂ ಚುಚ್ಚುಮದ್ದುಗಳನ್ನು 55 ಪುರುಷರ ಮೇಲೆ ಪ್ರಯೋಗಿಸಿದ ನಂತರ ಸಂತಾನ ನಿರೋಧಕ ಶಕ್ತಿಯನ್ನು ಖಾತರಿ ಪಡಿಸಿಕೊಳ್ಳಲಾಗಿದೆ. ಪ್ರೊ. ಡೇವಿಡ್ ಹ್ಯಾಂಡಲ್ಸ್‌ಮನ್ ಈ ಗುಳಿಗೆ ಹಾಗೂ ಚುಚ್ಚುಮದ್ದುಗಳನ್ನು ಕಂಡುಹಿಡಿಯುವಲ್ಲಿ ಮಹತ್ತರ ಪಾತ್ರ ವಹಿಸಿದ ವಿಜ್ಞಾನಿ.
ಪುರುಷರ ಹಾರ್ಮೋನು ಟೆಸ್ಟೋಸ್ಟಿರಾನ್ ಮತ್ತು ಸ್ತ್ರೀಯರ ಹಾರ್ಮೋನ್ ಪ್ರಾಜೆಸ್ಟಿನ್‌ನನ್ನು ನಿಯತ ಪ್ರಮಾಣದಲ್ಲಿ ಸೇರಿಸಿ, ಗುಳಿಗೆ ಹಾಗೂ ಚುಚ್ಚುಮದ್ದನ್ನು ತಯಾರಿಸಲಾಗಿದೆ. ಇದನ್ನು ತೆಗೆದುಕೊಳ್ಳುವ ಪುರುಷ ಹೆಂಗಸಿನೊಟ್ಟಿಗೆ ಕೂಡಿದಾಗ, ಆಕೆಯಲ್ಲಿ ತತ್ತಿ ಉತ್ಪತ್ತಿಯಾಗುವುದಿಲ್ಲ. ಇದು ಪ್ರಯೋಗಗಳಿಂದ ದೃಢಪಟ್ಟಿದೆ. ಅಲ್ಲದೆ ಇದನ್ನು ಉಪಯೋಗಿಸಿರುವ ಪುರುಷರಿಗೆ ಯಾವುದೇ ಇತರೆ ದೈಹಿಕ ತೊಂದರೆಗಳಾಗಿಲ್ಲ. ಸಂತಾನ ನಿರೋಧಕ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ಕೆಲವೇ ತಿಂಗಳುಗಳಲ್ಲಿ ಗಂಡಿಗೆ ಅಪ್ಪನಾಗುವ ಯೋಗ್ಯತೆ ಬರುತ್ತದೆ. ಇದು ಕೂಡ ಪ್ರಯೋಗದಿಂದ ಸ್ಪಷ್ಟವಾಗಿದೆ ಎನ್ನುತ್ತಾರೆ ಡೇವಿಡ್ ಹ್ಯಾಂಡಲ್ಸ್‌ಮನ್.
ನನ್ನ ಕೆಲಸ ಮುಗಿದಿದೆ. ಇನ್ನು ಔಷಧಿ ತಯಾರಿಸುವ ಕಂಪನಿಗಳು ವಿಸ್ತುತ ಪ್ರಯೋಗಗಳನ್ನು ನಡೆಸಿ, ಗುಳಿಗೆ ಹಾಗೂ ಚುಚ್ಚುಮದ್ದನ್ನು ಮಾರುಕಟ್ಟೆಗೆ ತರಬೇಕು. ಚುಚ್ಚುಮದ್ದನ್ನು 3- 4 ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕಾಗುತ್ತದೆ. ಗುಳಿಗೆಯನ್ನು ನಿತ್ಯ ನುಂಗುವ ಜರೂರತ್ತಿರುತ್ತದೆ. ಗುಳಿಗೆ ನುಂಗುವುದನ್ನು ಮರೆಯುವ ಆತಂಕವಿರುವವರು ಚುಚ್ಚುಮದ್ದನ್ನು ತೆಗೆದುಕೊಳ್ಳಬಹುದು ಎಂಬುದು ಹ್ಯಾಂಡಲ್ಸ್‌ಮನ್ ಸಲಹೆ.
ಈ ಹಿಂದೆ ಸಾಕಷ್ಟು ವಿಜ್ಞಾನಿಗಳು ತಯಾರಿಸಿದ ಪುರುಷ ಸಂತಾನ ನಿಯಂತ್ರಕ ತಂತ್ರಗಳು ವಿಫಲವಾಗಿವೆ. ಕೆಲವು ಇತರೆ ದೈಹಿಕ ತೊಂದರೆಗಳನ್ನು ಒಡ್ಡಿದ್ದವು. ಇನ್ನು ಕೆಲವು ಜೊಳ್ಳು ಔಷಧಿಗಳಾಗಿದ್ದವು. ಈಗ ಹ್ಯಾಂಡಲ್ಸ್‌ಮನ್ ಪಾಳಿ. ಮಾತ್ರೆಗಳನ್ನು ನುಂಗಿ ಬೇಸತ್ತಿರುವ ಹೆಂಗಸರು ಪುರುಷರನ್ನು ಔಷಧಿ ಅಂಗಡಿಗೆ ದೂಡುವ ಕಾಲ ಸನ್ನಿಹಿತವಾಗಿದೆ.
(ಏಜೆನ್ಸೀಸ್)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications