ಬಸ್ಸು ಯಾತ್ರೆಗೆ ಬಟ್ಟೆ- ಬರೆ ರೆಡಿ ಮಾಡಿಕೊಳ್ಳುತ್ತಿರುವ ಕೃಷ್ಣ
ಬಸ್ಸು ಯಾತ್ರೆಗೆ ಬಟ್ಟೆ- ಬರೆ ರೆಡಿ ಮಾಡಿಕೊಳ್ಳುತ್ತಿರುವ ಕೃಷ್ಣ
ಜನ ಸ್ಪಂದನ ಯಾತ್ರೆಗೆ ಮುನ್ನವೇ ರೈತ ಸ್ಪಂದನ-ಯಶಸ್ವಿನಿ ಯೋಜನೆ ವಿಸ್ತರಣೆ
ಒಂದು ಹೈಟೆಕ್ ಬಸ್ಸು ಹಾಗೂ ಅದರೊಂದಿಗೆ ಒಂದು ಸುಸಜ್ಜಿತ ಸ್ವರಾಜ್ ಮಜ್ದಾ ಕೃಷ್ಣ ಯಾತ್ರೆಯ ರಥಗಳಾಗಲಿವೆ. ಈ ಎರಡೂ ವಾಹನಗಳು ಕರ್ನಾಟರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವು. ಬಸ್ಸಿನಲ್ಲಿ ಜನರಿಗೆ ಕೇಳುವಂತೆ ಮಾತಾಡಲು ಧ್ವನಿ ವರ್ಧಕ ಕೂಡ ಇರುತ್ತದೆ. ಕೃಷ್ಣ ಜೊತೆಯಲ್ಲಿ ಸರ್ಕಾರದ ಹಿರಿಯ ಮಂತ್ರಿಗಳು ಕೂಡ ಪ್ರಯಾಣ ಮಾಡಲಿದ್ದಾರೆ.
ಕೃಷ್ಣ ಇಲ್ಲಿಗೆಲ್ಲ ಹೋಗ್ತಾರೆ : ಬೆಂಗಳೂರು ನಗರ ಹಾಗೂ ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆಯ ಕೆಲವು ಭಾಗ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳ ಹಳ್ಳಿಗಳಿಗೆ ಕೃಷ್ಣ ಭೇಟಿ ನೀಡಲಿದ್ದಾರೆ. ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆ ಗ್ರಾಮಸ್ಥರೊಡನೆ ಮುಖಾಮುಖಿ ಆಗುವುದರೊಂದಿಗೆ ಕೃಷ್ಣ ಯಾತ್ರೆ ಪ್ರಾರಂಭವಾಗಲಿದ್ದು, ಅ. 12ನೇ ತಾರೀಕು ಬಿಜಾಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತಾಡುವುದರೊಂದಿಗೆ ಮುಗಿಯಲಿದೆ. ಅಕ್ಟೋಬರ್ 10ನೇ ತಾರೀಕು ಯಾತ್ರೆಗೆ ವಿರಾಮ. ಅವತ್ತು ತಮಿಳುನಾಡಿನ ಶ್ರೀಪೆರಂಬದೂರಿಗೆ ಸಮಾರಂಭವೊಂದರಲ್ಲಿ ಭಾಗವಹಿಸಲು ತೆರಳಬೇಕಾಗಿರುವುದರಿಂದ ಕೃಷ್ಣ ಯಾತ್ರೆಗೆ ಅವತ್ತು ಬಿಡುವು. ಅ. 11ನೇ ತಾರೀಕು ಮತ್ತೆ ಯಾತ್ರೆ ಮುಂದುವರೆಯುತ್ತದೆ.
ಸ್ವೀಕರಿಸುವ ಅಹವಾಲಿಗೆ 30 ದಿನದಲ್ಲಿ ಉತ್ತರ : ‘ಜನ ಸ್ಪಂದನ’ ಯಾತ್ರೆಯ ವೇಳೆ ತಮ್ಮ ಕಾರ್ಯಕ್ರಮಗಳ ಬಗ್ಗೆ ಜನ ಏನಂತಾರೆ ಅಂತ ತಿಳಿದುಕೊಳ್ಳಲಿರುವ ಕೃಷ್ಣ, ಜನರ ಅಹವಾಲುಗಳನ್ನೂ ಸ್ವೀಕರಿಸುವರು. ಅಹವಾಲುಗಳಿಗೆ 30 ದಿನದೊಳಗೆ ಉತ್ತರವನ್ನೂ ಕೊಡುವುದಾಗಿ ಅವರು ಹೇಳಿದ್ದಾರೆ. ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ಮಂಗಳವಾರ (ಅ. 07) ಸುದ್ದಿಗಾರರಿಗೆ ಇಷ್ಟೆಲ್ಲ ಮಾಹಿತಿ ಕೊಟ್ಟರು.
ವಿರೋಧ ಪಕ್ಷಗಳ ಪ್ರತಿ ಪ್ರಚಾರ : 1999ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾಗ ಕೃಷ್ಣ ‘ಪಾಂಚಜನ್ಯ ಯಾತ್ರೆ’ಯನ್ನು ನಡೆಸಿದ್ದರು. ಆಗಲೂ ಇದೇ ರೀತಿ ಬಸ್ ಸಂಚಾರ. ಆಗ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮುಂದಿನ ವರ್ಷ ಲೋಕಸಭಾ ಚುನಾವಣೆಗೆ ಕೃಷ್ಣ ಶುರುವಿಟ್ಟುಕೊಂಡಿರುವ ಪ್ರಚಾರದ ವರಸೆ ಇದು ಎಂದು ವಿರೋಧ ಪಕ್ಷಗಳು ಕಟಕಿಯಾಡಿವೆ. ಅಷ್ಟೇ ಅಲ್ಲ, ಬಿಜೆಪಿ ಮತ್ತು ಅಖಿಲ ಭಾರತ ಪ್ರಗತಿಪರ ಜನತಾ ದಳ (ಎಐಪಿಜೆಡಿ) ಪಕ್ಷಗಳು ಪ್ರತಿ ಪ್ರಚಾರ ಪ್ರಾರಂಭಿಸುವುದಾಗಿ ಧಮಕಿ ಹಾಕಿವೆ.
ಯಾತ್ರೆಗೆ ಮುನ್ನವೇ ‘ರೈತ ಸ್ಪಂದನ’, ಯಶಸ್ವಿನಿ ಯೋಜನೆ ವಿಸ್ತರಣೆಪ್ರಸ್ತುತ 17 ಲಕ್ಷ ರೈತರಿಗೆ ಒದಗಿಸಿರುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು 25 ಲಕ್ಷ ರೈತರಿಗೆ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅಲ್ಲಂ ವೀರಭದ್ರಪ್ಪ ಹೇಳಿದರು. ಅತಿ ವಿಶೇಷ ಚಿಕಿತ್ಸೆ ಅಗತ್ಯವಿರುವ ರೈತರು ಇನ್ನು ಮುಂದೆ ಭಾರೀ ಹಣ ತೆರಬೇಕಾಗಿಲ್ಲ. ರಾಜ್ಯದ 80 ಉತ್ತಮ ಆಸ್ಪತ್ರೆಗಳನ್ನು ಯೋಜನೆಯ ತೆಕ್ಕೆಗೆ ತರಲಾಗಿದೆ. ಅಗತ್ಯ ಬಿದ್ದರೆ ಯೋಜನೆಗೆ ಇನ್ನಷ್ಟು ಆಸ್ಪತ್ರೆಗಳನ್ನು ಸೇರಿಸಿಕೊಳ್ಳಲಾಗುವುದು ಎಂದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications