ಮಕ್ಕಳಿಗೆ ಇಂಗ್ಲಿಷ್ ಕಲಿಸಿ, ಪರೀಕ್ಷೆಯ ಭೂತ ಅಳಿಸಿ
ಮಕ್ಕಳಿಗೆ ಇಂಗ್ಲಿಷ್ ಕಲಿಸಿ, ಪರೀಕ್ಷೆಯ ಭೂತ ಅಳಿಸಿ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಕೆಸಿ ಸಲಹೆಯನ್ನು ಜಿಎಸ್ಸೆಸ್ ‘ಫೈನ್ ಟ್ಯೂನ್’ ಮಾಡಿದ್ದಾರೆ. ಇಂಗ್ಲಿಷ್ ಕಲಿಕೆ ಭಾರವಾಗದಿರಲು ಪರೀಕ್ಷೆಯ ಪೆಡಂಭೂತವನ್ನು ಹೋಗಲಾಡಿಸಿ ಎಂಬ ಅವರ ಕಳಕಳಿ ಮೆಚ್ಚತಕ್ಕದ್ದು.
ಸೋಮವಾರ (ಅ. 06) ನಗರದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭದಲ್ಲಿ ಜಿಎಸ್ಸೆಸ್ ಮಾತಾಡಿದರು. ಅವರ ಮಾತಿನಲ್ಲಿ ಕನ್ನಡ ಕಳಕಳಿಗೆ ಸಕಾಲಿಕತೆ ಬೆರೆತಿತ್ತು. ಜಿಎಸ್ಸೆಸ್ ಇವರ ಬಿಡಿಬಿಡಿ ಸಲಹೆಗಳು ಇಂತಿವೆ-
- ಇಂಗ್ಲಿಷ್ ಕಲಿಯುವುದು ಬೇಕು ಎಂಬುದು ಕುವೆಂಪು ಅವರ ಅಭಿಪ್ರಾಯವೂ ಆಗಿತ್ತು. ಶಾಲೆಯ ಮಕ್ಕಳಿಗೆ ಮೂರನೇ ಇಯತ್ತೆಯಿಂದಲೇ ಇಂಗ್ಲಿಷ್ ಕಲಿಸೋಣ. ಆದರೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದು ಬೇಡ. ಮೂರನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸಬೇಕೆಂಬ ಶಿಕ್ಷಣ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಅವರ ಅಭಿಪ್ರಾಯವನ್ನು ಹೀಗೆ ಜಾರಿಗೆ ತರಬೇಕು.
- ಇಂಗ್ಲಿಷ್ ಭಾಷೆ ಕಲಿಕೆಯ ಒಂದು ವಿಷಯವಾಗಿರಲಿ. ಅದನ್ನು ಪರೀಕ್ಷೆಯ ವಿಷಯವಾಗಿಸಿದರೆ, ಹಳ್ಳಿಯ ಮಕ್ಕಳು ಹೆಚ್ಚಾಗಿ ಅನುತ್ತೀರ್ಣರಾಗಿ, ಶಿಕ್ಷಣ ಭಾರವಾಗುವ ಅಪಾಯವಿರುತ್ತದೆ.
- ಕನ್ನಡದಲ್ಲಿ ಅಧ್ಯಯನ ಮಾಡಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರಶಸ್ತಿ ಕೊಡುವ ಪ್ರಕ್ರಿಯೆಯೇ ವಿಲಕ್ಷಣ ಅನಿಸುತ್ತದೆ. ಕನ್ನಡ ಓದಲಾಗದ ಪ್ರತಿಕೂಲ ಪರಿಸ್ಥಿತಿ ಇದೆ ಎನ್ನುವುದಕ್ಕೆ ಈ ಪ್ರಶಸ್ತಿಗಳೇ ಕನ್ನಡಿ ಹಿಡಿಯುತ್ತವೆ.
- ಆಂಗ್ಲರ ಕಾಲದಲ್ಲಿ ಶಿಕ್ಷಣ ಮಾಧ್ಯಮ ಕನ್ನಡದಲ್ಲಿತ್ತು. ಆವಾಗ ಅನೇಕ ಅಧಿಕಾರಿಗಳು ಕಲಿಕೆಯ ಮಾಧ್ಯಮ ಕನ್ನಡದಲ್ಲೇ ಇರಲಿ ಎಂದು ಸಲಹೆ ಕೊಟ್ಟಿದ್ದರು. ಆದರಿವತ್ತು ಇಂಗ್ಲಿಷ್ ಮಾಧ್ಯಮದ ಶಾಲೆಗಳು ಬೀದಿ ಬೀದಿಗಳಲ್ಲಿ ತಲೆಯೆತ್ತುತ್ತಿರುವುದು ವಿಪರ್ಯಾಸ.
- ಕರ್ನಾಟಕದಲ್ಲಿರುವ ಕನ್ನಡೇತರರು ಮುಖ್ಯ ಭಾಷಾ ವಾಹಿನಿಯಲ್ಲಿ ಬೆರೆಯಬೇಕು. ಕನ್ನಡ ಕಲಿಯುವುದನ್ನು ಜರೂರತ್ತಾಗಿಸಿಕೊಳ್ಳಬೇಕು. ಸುಮ್ಮನೆ ದ್ವೀಪಗಳಾಗಿ ಉಳಿಯಬಾರದು. ಟೀವಿಯಂಥಾ ಮಾಧ್ಯಮಗಳೂ ಕನ್ನಡ ಭಾಷೆಯ ಕಲಿಕೆಯಲ್ಲಿ ಮುಖ್ಯ ಪಾತ್ರ ವಹಿಸಬೇಕು. ‘ಅ, ಆ, ಇ, ಈ ಮೊದಲು, ಎ,ಬಿ,ಸಿ,ಡಿ ಆಮೇಲೆ’ ಎಂಬ ಘೋಷ ವಾಕ್ಯ ಎಲ್ಲೆಲ್ಲೂ ಮೊಳಗಬೇಕು.
- ಪ್ರಸ್ತುತ ಪರಿಸ್ಥಿತಿಯಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವುದು ಔಚಿತ್ಯಪೂರ್ಣವಾದುದು. ಇದನ್ನು ಏಳನೇ ತರಗತಿಯವರೆಗೆ ವಿಸ್ತರಿಸಿದರೆ ಇನ್ನೂ ಒಳ್ಳೆಯದು.
ಜಿಎಸ್ಸೆಸ್ ಸಲಹೆಗಳ ಬಗ್ಗೆ ನಿಮಗೇನನ್ನಿಸುತ್ತೆ ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications