ಸಿಇಟಿ ಸೆಲ್ ವಾಸ್ತು ಸರಿಯಿಲ್ಲ, ಅದಕ್ಕೇ ತೊಂದರೆಗಳು- ಡಿಕೇಶಿ
ಸಿಇಟಿ ಸೆಲ್ ವಾಸ್ತು ಸರಿಯಿಲ್ಲ, ಅದಕ್ಕೇ ತೊಂದರೆಗಳು- ಡಿಕೇಶಿ
‘ವಿಧಾನಸೌಧದ ಸೌತ್‌ಬ್ಲಾಕ್ ಕಟ್ಟಲು ಹಳ್ಳ ತೋಡಿದ್ದೇ ರಾಜ್ ಅಪಹರಣವಾಯಿತು’
ಈಗ ನಿರ್ಮಾಣ ಹಂತದಲ್ಲಿರುವ ವಿಧಾನಸೌಧದ ಸೌತ್ ಬ್ಲಾಕ್ ಕಟ್ಟಡ ಕಟ್ಟುವಿಕೆ ಪ್ರಾರಂಭವಾದಾಗ, 30 ಅಡಿ ಆಳದ ಒಂದು ಗುಂಡಿ ತೋಡಬೇಕಾಗಿತ್ತು. ಅದನ್ನು ತೋಡಿದ ಸಂದರ್ಭದಲ್ಲಿ ಸರ್ಕಾರ ತೊಂದರೆ ಎದುರಿಸಬೇಕಾಗುತ್ತೆ ಎಂದು ಪ್ರಕೃತಿ ವಾಸ್ತುನಿಧಿ ಪ್ರತಿಷ್ಠಾನದ ಅಧ್ಯಕ್ಷ ನಿಧೀಶ್ ಎಚ್ಚರಿಸಿದರು. ಅದು ನಿಜವಾಯಿತು. ಗುಂಡಿ ತೋಡಿದ ಸಂದರ್ಭದಲ್ಲಿ ವೀರಪ್ಪನ್ ವರನಟ ರಾಜ್‌ಕುಮಾರ್ ಅವರನ್ನು ಅಪಹರಿಸಿದ. ಕಾವೇರಿ ಸಮಸ್ಯೆಯೂ ಬಿಗಡಾಯಿಸಿತು. ಆಮೇಲೆ ನಿಧೀಶ್ ಎಚ್ಚರಿಕೆಯ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡೆವು. ಸರ್ಕಾರ ಬಂದ ಸಮಸ್ಯೆಗಳನ್ನು ನಿರಾತಂಕವಾಗಿ ಎದುರಿಸಿತು. ವಾಸ್ತು ನಮ್ಮ ಸಂಸ್ಕೃತಿ. ಅದನ್ನು ಉಳಿಸಿಕೊಂಡು ಹೋಗಬೇಕು.
ಈಗ ಸಿಇಟಿ ಸಮಸ್ಯೆ ಶುರುವಾಗಿದೆ. ಇದಕ್ಕೆ ಕಾರಣ ಮಲ್ಲೇಶ್ವರದಲ್ಲಿರುವ ಸಿಇಟಿ ಘಟಕದ ವಾಸ್ತು ಸರಿಯಿಲ್ಲ. ಕಟ್ಟಡದ ಮುಖ್ಯ ದ್ವಾರ ಸರಿಯಾದ ದಿಕ್ಕಿಗೆ ಇಲ್ಲ. ಹಿಂದೆ ಕಾಳಿದಾಸ ರಸ್ತೆಯಲ್ಲಿ ಸಿಇಟಿ ಘಟಕ ಇದ್ದಾಗ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಕಿರಿಕ್ಕುಗಳು ಶುರುವಾಗುತ್ತಿವೆ. ಇದು ನಂಬಲೇಬೇಕಾದ ಸಂಗತಿ.
ಪ್ರಕೃತಿ ವಾಸ್ತು ನಿಧಿ ಪ್ರತಿಷ್ಠಾನ ಭಾರತೀಯ ವಿದ್ಯಾ ಭವನದಲ್ಲಿ ಏರ್ಪಡಿಸಿದ್ದ ವಾಸ್ತುವಿನ ಪ್ರಸ್ತುತತೆ ಎಂಬ ಒಂದು ದಿನದ ಕಾರ್ಯಾಗಾರವನ್ನು ಶುಕ್ರವಾರ (ಅ.03) ಉದ್ಘಾಟಿಸಿ ಡಿಕೇಶಿ ಮಾತಾಡಿದ ಪರಿಯಿದು. ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅಲ್ಲದೆ ಅನೇಕ ಮಂತ್ರಿಮಹೋದರೂ ಇವತ್ಪ ನಿಧೀಶ್ ವಾಸ್ತು ಸಲಹೆಗಳನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದಾರೆ ಎಂಬ ಸತ್ಯವನ್ನು ಡಿಕೇಶಿ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ। ಎಂ.ಎಸ್.ತಿಮ್ಮಪ್ಪನವರಂಥ ಬುದ್ಧಿ ಜೀವಿ ಡಿಕೇಶಿ ಮಾತನ್ನು ಮೌನವಾಗಿ ಕೇಳಿಸಿಕೊಳ್ಳುತ್ತಿದ್ದರು. ಇವತ್ತು ಸರ್ಕಾರದ ಅನಧಿಕೃತ ವಾಸ್ತು ಸಲಹೆಗಾರರಾಗಿರುವ , ಪ್ರಕೃತಿ ವಾಸ್ತು ನಿಧಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎನ್.ನಿಧೀಶ್ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಿ.ಇ.ಟಿ. ಸಮಸ್ಯೆ ಸರಿ ಹೋಗಬೇಕಾದರೆ ಎಲ್ಲಿ ಹಳ್ಳ ತೋಡಬೇಕು, ಇನ್ನೆಲ್ಲಿ ಹಳ್ಳ ತೋಡಿದರೆ ವೀರಪ್ಪನ್ ಸಿಗುತ್ತಾನೆ ಅನ್ನುವುದನ್ನು ವಾಸ್ತು ಶಾಸ್ತ್ರಜ್ಞರು ಹೇಳುವಂತಿದ್ದರೆ ಚೆನ್ನಾಗಿತ್ತು, ಅಲ್ಲವೇ?
ಮುಖಪುಟ / ವಾರ್ತೆಗಳು












Click it and Unblock the Notifications