ಹೈಕೋರ್ಟ್ ಪೀಠ : ಎಸ್ಸೆಂ.ಕೃಷ್ಣ ನೇತೃತ್ವದಿ ಜೈನ್ ಬಳಿಗೆ ನಿಯೋಗ
ಹೈಕೋರ್ಟ್ ಪೀಠ : ಎಸ್ಸೆಂ.ಕೃಷ್ಣ ನೇತೃತ್ವದಿ ಜೈನ್ ಬಳಿಗೆ ನಿಯೋಗ
ಶಾಂತಿ ಕಾಪಾಡಿಕೊಳ್ಳಲು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಮನವಿ
ಆ.29ರ ಶುಕ್ರವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ, ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತು ಎನ್. ಕೆ. ಜೈನ್ ಬಳಿ ಮರು ಮನವಿ ಸಲ್ಲಿಸುವ ಕುರಿತು ಅವಿರೋಧವಾಗಿ ನಿರ್ಣಯಿಸಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ. ಬಿ. ಚಂದ್ರೇಗೌಡ ಈ ವಿಷಯ ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯನ್ನು ಸರಕಾರ ಬೆಂಬಲಿಸಬೇಕು. ಆದರೆ ಉತ್ತರ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪೀಠ ಸ್ಥಾಪನೆಯಾಗಬೇಕು ಎಂಬುದನ್ನು ನ್ಯಾಯಮೂರ್ತಿಗಳೇ ನಿರ್ಣಯಿಸಲು ಬಿಡಬೇಕು ಎಂದು ಸರ್ವ ಪಕ್ಷಗಳ ಸಭೆ ಅಭಿಪ್ರಾಯಪಟ್ಟಿತು.
ಶಾಂತಿಗೆ ಕರೆ: ಸದ್ಯದಲ್ಲೇ ಮುಖ್ಯನ್ಯಾಯಮೂರ್ತಿಗಳ ಬಳಿ ನಿಯೋಗ ತೆರಳಲಿದೆ. ಆದ್ದರಿಂದ ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠಕ್ಕಾಗಿ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು ತಾಳ್ಮೆ ವಹಿಸಬೇಕು ಎಂದು ಮುಖ್ಯಮಂತ್ರಿ ಕೃಷ್ಣ ಕರೆ ನೀಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಜರೂರತ್ತು ಈಗಿಲ್ಲ ಎಂದು ಇತ್ತೀಚೆಗೆ ಮುಖ್ಯನ್ಯಾಯಮೂರ್ತಿ ಎನ್. ಕೆ. ಜೈನ್ ಸರಕಾರಕ್ಕೆ ತಿಳಿಸಿದ್ದರು. ಪರಿಣಾಮವಾಗಿ ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠಕ್ಕಾಗಿ ಆಗ್ರಹಿಸಿ ಪ್ರತಿಭಟನೆಗಳು ಹೆಚ್ಚಾಗತೊಡಗಿವೆ.
ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ, ಜೆಡಿಯು, ಜೆಡಿಎಸ್, ಎಐಎಡಿಎಂಕೆ ಮತ್ತಿತರ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಉತ್ತರ ಕರ್ನಾಟಕದಲ್ಲಿ ಆದಷ್ಟು ಬೇಗನೇ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಒತ್ತಾಯಿಸಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಸಭೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications