‘ಶತಮಾನದ ಸಾಕ್ಷಿ ಪುರುಷ’ ನಿಟ್ಟೂರರಿಗೆ ನೂರರ ಅಭಿನಂದನೆ
‘ಶತಮಾನದ ಸಾಕ್ಷಿ ಪುರುಷ’ ನಿಟ್ಟೂರರಿಗೆ ನೂರರ ಅಭಿನಂದನೆ
ಶತಾಯುಷಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಆಗ್ರಹ
ಭಾರತ ರತ್ನ ಪ್ರಶಸ್ತಿಯನ್ನು ಪಡೆಯಲು ನಿಟ್ಟೂರು ಶ್ರೀನಿವಾಸರಾವ್ ಅತ್ಯಂತ ಅರ್ಹ ವ್ಯಕ್ತಿ . ನಿಟ್ಟೂರರ ನಿಸ್ವಾರ್ಥ ಸೇವೆಯನ್ನು ಗುರ್ತಿಸಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ನ್ಯಾಯಮೂರ್ತಿ ರಂಗನಾಥ ಮಿಶ್ರಾ ಆಗ್ರಹಿಸಿದರು. ನಿಟ್ಟೂರರು ನೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಭಾನುವಾರ (ಆ.24) ನಡೆದ ಅಭಿನಂದನಾ ಸಮಾರಂಭದಲ್ಲಿ ಮಿಶ್ರಾ ಮಾತನಾಡುತ್ತಿದ್ದರು. ನಿಟ್ಟೂರು ಶ್ರೀನಿವಾಸರಾವ್ ಜನ್ಮ ಶತಾಬ್ಧಿ ಉತ್ಸವ ಸಮಿತಿ ಕಾರ್ಯಕ್ರಮವನ್ನು ಏರ್ಪಡಿಸಿತ್ತು .
ದೇಶ ಮತ್ತು ರಾಜ್ಯದ ಬಗ್ಗೆ ಅಪಾರ ಕಳಕಳಿ ಹೊಂದಿರುವ ನಿಟ್ಟೂರು ಶ್ರೀನಿವಾಸರಾಯರು ಕರ್ನಾಟಕ ಏಕೀಕರಣದಲ್ಲೂ ಮಹತ್ವದ ಪಾತ್ರ ವಹಿಸಿದ್ದರು ಎಂದು ಅರಣ್ಯ ಸಚಿವ ಕೆ.ಎಚ್.ರಂಗನಾಥ್ ಬಣ್ಣಿಸಿದರು. ಇದೇ ಸಂದರ್ಭದಲ್ಲಿ ‘ಶತಮಾನದ ಸಾಕ್ಷಿ ಪುರುಷ’ ಅಭಿನಂದನಾ ಗ್ರಂಥವನ್ನು ಸಚಿವ ರಂಗನಾಥ್ ಬಿಡುಗಡೆ ಮಾಡಿದರು.
ನಿಟ್ಟೂರರ ಬದುಕಿನ ಕುರಿತ ಕವಿತೆಯಾಂದನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ರಾಣಿ ಸತೀಶ್ ವಾಚಿಸಿದರು. ವಿಮರ್ಶಕ ಪ್ರೊ.ಎಲ್.ಎಸ್.ಶೇಷಗಿರಿರಾವ್ ‘ಶತಮಾನದ ಸಾಕ್ಷಿ ಪುರುಷ’ ಕೃತಿಯ ಬಗ್ಗೆ ಮಾತನಾಡಿದರು.
ಶಾಲು ಹೊದಿಸಿ, ಫಲತಾಂಬೂಲ ಹಾಗೂ ಪುಷ್ಪಗುಚ್ಛ ನೀಡುವ ಮೂಲಕ ಶತಾಯುಷಿ ನಿಟ್ಟೂರು ಶ್ರೀನಿವಾಸರಾಯರನ್ನು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಸನ್ಮಾನಿಸಿದರು. ಅಪರಾಧ ನ್ಯಾಯಪದ್ಧತಿ ಸುಧಾರಣಾ ಆಯೋಗದ ಅಧ್ಯಕ್ಷ ವಿ.ಎಸ್.ಮಳೀಮಠ್, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಯು.ಆರ್.ಅನಂತಮೂರ್ತಿ, ನಿಟ್ಟೂರು ಜನ್ಮಶತಾಬ್ಧಿ ಸಮಿತಿಯ ಕಾರ್ಯಾಧ್ಯಕ್ಷ ಹಾರನಹಳ್ಳಿ ರಾಮಸ್ವಾಮಿ, ಖಜಾಂಚಿ ವಿ.ಎಸ್.ಕೃಷ್ಣ ಅಯ್ಯರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications