ಮಂಗಳೂರಿನ ಬೆಂಗ್ರೆ ಬಂದರಲ್ಲಿ ಬೆಂಕಿ, 20 ದೋಣಿಗೆ ಹಾನಿ
ಮಂಗಳೂರಿನ ಬೆಂಗ್ರೆ ಬಂದರಲ್ಲಿ ಬೆಂಕಿ, 20 ದೋಣಿಗೆ ಹಾನಿ
ದೋಣಿ ಮಾಲಿಕರಿಗೆ ಆ. 26ರಂದು ಪರಿಹಾರ
ಆ.20ರ ಬುಧವಾರ ರಾತ್ರಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ ಆರು ದೋಣಿಗಳು ಪೂರ್ತಿ ಸುಟ್ಟು ಬೂದಿಯಾಗಿದ್ದರೆ, 9 ದೋಣಿಗಳು ಉಪಯೋಗಿಸಲು ಬಾರದಷ್ಟು ಸುಟ್ಟು ಹೋಗಿವೆ. ಮೂರು ದೋಣಿಗಳಿಗೆ ಅಪಘಾತ ವಿಮೆಯೂ ಇರಲಿಲ್ಲ ಎಂದು ಅಪಘಾತ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಸಾಲಿಯಾನ ಹೇಳಿದರು.
ಬೆಂಕಿ ಅಪಘಾತ ಸಂಭವಿಸಿದಾಗ ಎಂಆರ್‌ಪಿಎಲ್ ಹಾಗೂ ನವ ಮಂಗಳೂರು ಬಂದರು ಮಂಡಳಿಯ ಅಗ್ನಿ ಶಾಮಕವೂ ಸೇರಿದಂತೆ ಒಟ್ಟು ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದವು. ಬೆಂಗ್ರೆ ಪ್ರದೇಶಕ್ಕೆ ಸರಿಯಾದ ರಸ್ತೆ ಇಲ್ಲದೇ ಇರುವುದರಿಂದ ಅಗ್ನಿ ಶಾಮಕ ವಾಹನಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪುದು ಕಷ್ಟವಾಯಿತು. ಸ್ಥಳೀಯರು ಬೆಂಕಿ ಹರಡದಂತೆ ತುರ್ತಾಗಿ ನೀರು ಚೆಲ್ಲಿದ್ದರಿಂದ ಹೆಚ್ಚಿನ ದೋಣಿಗಳಿಗೆ ಬೆಂಕಿ ತಗುಲುವುದು ತಪ್ಪಿದೆ. ಅಲ್ಲದೆ ಆಳ ಸಮುದ್ರ ಮೀನುಗಾರಿಕೆಯ ದುಬಾರಿ ದೋಣಿಗಳು ಹದಿನೈದು ದಿನಗಳ ಹಿಂದೆಯೇ ಸಮುದ್ರ ದಡ ಬಿಟ್ಟು ಹೋಗಿದ್ದರಿಂದ ಹೆಚ್ಚಿನ ಅನಾಹುತವಾಗಲಿಲ್ಲ ಎಂದು ಸಾಲಿಯಾನ ಹೇಳಿದರು.
ಬೆಂಕಿ ಅಪಘಾತದ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಪೂರ್ತಿಯಾಗಿ ಹಾಳಾಗಿರುವ ದೋಣಿಗಳ ಮಾಲಿಕರಿಗೆ ತುರ್ತು ಪರಿಹಾರ ನಿಧಿಯಿಂದ 25 ಸಾವಿರ ರೂಪಾಯಿ ಹಾಗೂ ಅರೆ ಬರೆ ಹಾಳಾಗಿರುವ ದೋಣಿ ಮಾಲಿಕರಿಗೆ 5 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಾಲಿಯಾನ ಪ್ರಕಟಿಸಿದರು. ಈ ಹಣವನ್ನು ಆಗಸ್ಟ್ 26ರಂದು ಬಿಡುಗಡೆ ಮಾಡಲಾಗುವುದು. ಈ ಅಪಘಾತದ ಬಗ್ಗೆ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರಿಗೆ ಫ್ಯಾಕ್ಸ್ ಮೂಲಕ ಈಗಾಗಲೇ ತಿಳಿಸಲಾಗಿದೆ. ಬಂದರಿನಲ್ಲಿ ಅಗ್ನಿಶಾಮಕ ಕೇಂದ್ರವೊಂದನ್ನು ತೆರೆಯುವ ಯೋಚನೆ ಮೀನುಗಾರಿಕಾ ವಿಭಾಗಕ್ಕಿದೆ ಎಂದು ಸಾಲಿಯಾನ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications