ದೊರೆಸ್ವಾಮಿ ಅಳಲು ದೇವೇಗೌಡರ ಕೊಳಲು
ದೊರೆಸ್ವಾಮಿ ಅಳಲು ದೇವೇಗೌಡರ ಕೊಳಲು
ಬೆಂಗಳೂರಲ್ಲಿ ನಮ್ಮಕನ್ನಡ.ಕಾಂಗೆ ಚಾಲನೆ, ಧಾರವಾಡದಲ್ಲಿ ಅಮೆರಿಕನ್ನಡಿಗನ ಕೃತಿ ಬಿಡುಗಡೆ. ಆ.15ರ ಸ್ವಾತಂತ್ರ್ಯೋತ್ಸವದ ಆಸುಪಾಸು ಭರ್ತಿ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮ.
ಕನ್ನಡದಲ್ಲಿ ಇ-ಮೇಲ್ ಕಳಿಸುವ ಸೌಲಭ್ಯ ಕಲ್ಪಿಸಿರುವ ನಮ್ಮ ಕನ್ನಡ ಡಾಟ್ ಕಾಂಗೆ ಆ.17ರ ಭಾನುವಾರ ಚಾಲನೆ ದೊರೆಯಿತು.
ಅಮೆರಿಕಾದಲ್ಲಿ ಕರಿಯರಿಗೆ ಎಲ್ಲ ಕಂಪನಿಗಳಲ್ಲಿ ಆದ್ಯತೆ ಕೊಡಬೇಕು ಅಂತ ಕೆನಡಿ ಯೋಜನೆ ಹಾಕಿದ್ದರು. ಆ ಕಾರಣಕ್ಕೇ ಇವತ್ತು ಮುಖ್ಯವಾಹಿನಿಯಲ್ಲಿ ಕರಿಯರೂ ಬೆರೆತುಹೋಗಿದ್ದಾರೆ. ಅದೇ ರೀತಿ ಕರ್ನಾಟಕದ ಎಲ್ಲ ಬಹು ರಾಷ್ಟ್ರೀಯ ಕಂಪನಿಗಳು ಎಲ್ಲಾ ಜಾತಿಯವರಿಗೂ ಕೆಲಸ ಕೊಡುವ ಕೆಲಸ ಮಾಡಬೇಕು ಎಂದು ನಮ್ಮ ಕನ್ನಡ ಡಾಟ್ ಕಾಂನ ಕನ್ನಡ ವಿ- ಅಂಚೆ ವ್ಯವಸ್ಥೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಂತಕ ಡಾ.ಯು.ಆರ್. ಅನಂತಮೂರ್ತಿ ಅಭಿಪ್ರಾಯಪಟ್ಟರು.
ವಿದೇಶದಲ್ಲಿ ಕನ್ನಡ ಕೇವಲ ಭಾವನಾತ್ಮಕ ಭಾಷೆಯಾಗಿ ನಿಲ್ಲದೆ ವ್ಯಾವಹಾರಿಕವಾಗಿಯೂ ಬಳಕೆಗೆ ಬರಬೇಕು ಎಂಬ ಮಾತನ್ನು ಪುನರುಚ್ಚರಿಸಿದ ಅನಂತಮೂರ್ತಿ, ವೆಬ್‌ಸೈಟ್ ಮೂಲಕ ಕನ್ನಡ ವಿ- ಅಂಚೆ ವ್ಯವಸ್ಥೆ ಕಲ್ಪಿಸುತ್ತಿರುವ ನಮ್ಮ ಡಾಟ್ ಕಾಂನ ಯು. ಕೃಷ್ಣಮೂರ್ತಿ ಅವರನ್ನು ಅಭಿನಂದಿಸಿದರು.
ವಿ- ಅಂಚೆ ವ್ಯವಸ್ಥೆ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ, ಮಾಹಿತಿ ತಂತ್ರಜ್ಞಾನ ಒಂದು ಉದ್ದಿಮೆಯಾಗಿ ಬೆಳೆದಿದೆಯೇ ವಿನಃ ವಿದ್ಯೆಯಾಗಿ ಅಲ್ಲ ಎಂದು ವಿಷಾದಿಸಿದರು. ಐಟಿ ಕ್ಷೇತ್ರದಲ್ಲಿ ಕನ್ನಡದ ಕೆಲಸ ಮಾಡುವವರ ಬೆನ್ನು ತಟ್ಟಲು ಸರ್ಕಾರ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಕರೆ ಕೊಟ್ಟರು.
ಸಮಾರಂಭದಲ್ಲಿ ಮಾತಾಡಿದ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ಆರ್.ಪೆರುಮಾಳ್, ಕೃಷ್ಣಮೂರ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ಹೇಳಿದರು. ಇದನ್ನು ತಕ್ಷಣವೇ ವಿರೋಧಿಸಿದ ಅನಂತಮೂರ್ತಿ, ಚಿಕ್ಕ ವಯಸ್ಸಲ್ಲೇ ಪ್ರಶಸ್ತಿ ಇತ್ಯಾದಿ ಹಂಬಲಕ್ಕೆ ತುತ್ತಾಗದೆ ಕೃಷ್ಣಮೂರ್ತಿ ಮಹತ್ತರವಾದದ್ದನ್ನು ಸಾಧಿಸಲಿ ಎಂದರು.
ಮುಂದಿನ ದಿನಗಳಲ್ಲಿ ನಮ್ಮಕನ್ನಡ ಡಾಟ್ ಕಾಂ ವೆಬ್‌ಸೈಟು- ಹರಟೆ, ಶಿಕ್ಷಣ ಸೌಲಭ್ಯದ ಸಮಗ್ರ ಮಾಹಿತಿ, ಕಾಲೇಜುಗಳು ಹಾಗೂ ಅವುಗಳು ಕಲಿಸುತ್ತಿರುವ ಪಠ್ಯಗಳು, ಪರೀಕ್ಷೆ, ವಿದ್ಯಾರ್ಥಿ ವೇತನ, ಚಲನಚಿತ್ರ ಮಾಹಿತಿ, ಕಿರುತೆರೆಯ ತಾರೆಯರ ಪರಿಚಯ, ರಂಗಭೂಮಿಯ ಹೂರಣ ಮೊದಲಾದ ಸಂಗತಿಗಳನ್ನು ಕನ್ನಡದಲ್ಲೇ ಒಳಗೊಳ್ಳಲಿದೆ.
*
ನನ್ನಂಥ ಕೆಲವೇ ಕೆಲವು ಸ್ವಾತಂತ್ರ್ಯ ಹೋರಾಟಗಾರರನ್ನು ಶ್ರಾದ್ಧದ ಪುರೋಹಿತರಂತೆ ಬಳಸಿಕೊಳ್ಳಲಾಗುತ್ತಿದೆ. ವರ್ಷಕ್ಕೆ ಎರಡು ಮೂರು ದಿನ ಮಾತ್ರ ನಮ್ಮಂಥವರ ನೆನಪು. ನನ್ನ ಅಪಾರ ಅನುಭವವನ್ನು ಬಳಸಿಕೊಳ್ಳಲು ಯಾರಿಗೂ ಪುರುಸೊತ್ತಿಲ್ಲ , ಆಸಕ್ತಿಯೂ ಇಲ್ಲ .
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆ.16ರ ಶನಿವಾರ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮೇಲಿನಂತೆ ತಮ್ಮ ಅಳಲನ್ನು ತೋಡಿಕೊಂಡರು. ನನ್ನ ಬದುಕು ತೆರೆದ ಪುಸ್ತಕ ಎಂದು ಹೇಳಿದ ದೊರೆಸ್ವಾಮಿ- ಎಲ್ಲ ಪಕ್ಷಗಳು ತಾವು ಅಧಿಕಾರಕ್ಕೆ ಯೋಗ್ಯವಲ್ಲ ಎನ್ನುವುದನ್ನು ಸಾಬೀತು ಪಡಿಸಿವೆ. ಎಲ್ಲ ಸರ್ಕಾರಗಳೂ ಅಮೆರಿಕದ ದಾಸ್ಯಕ್ಕೆ ಬಿದ್ದಿವೆ ಎಂದು ಕಟುವಾಗಿ ನುಡಿದರು.
150-200 ಬಹುರಾಷ್ಟ್ರೀಯ ಕಂಪನಿಗಳು ದೇಶದಲ್ಲಿ ಬೀಡುಬಿಟ್ಟಿವೆ. ಈ ಕಂಪನಿಗಳಿಗಿಂತ ಅತ್ಯಂತ ಚಿಕ್ಕದಾದ ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ಆಡಳಿತ ಸ್ಥಾಪಿಸಿತು. ಇನ್ನು ಈ ಕಂಪನಿಗಳು ಹೇಗೆ ದಬ್ಬಾಳಿಕೆ ನಡೆಸಬಹುದು ಎಂದು ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು.
*
ಬೆಂಗಳೂರಿನ ಬಯಲು ಪರಿಷತ್ ಪ್ರಕಟಿಸಿರುವ ಮಾಜಿ ಪ್ರಧಾನಿ ದೇವೇಗೌಡರ ಕುರಿತಾದ ‘ನಾಡಿನ ರೈತನ ಪರದಾಟ ದೇವೇಗೌಡರ ಅವಿರತ ಹೋರಾಟ’ ಕೃತಿ, ಆ.17ರ ಭಾನುವಾರ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಯಾಯಿತು. ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಪುಸ್ತಕ ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಹಾಗೂ ವಿಮರ್ಶಕ ಪ್ರೊ.ಕಿ.ರಂ.ನಾಗರಾಜ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ದೇವೇಗೌಡರ ರೈತ ಕಾಳಜಿ ಪ್ರಶ್ನಾತೀತ. ನಾಲ್ಕು ದಶಕಗಳಿಂದ ರೈತರ ಪರ ದನಿಯಾಗಿ ದೇವೇಗೌಡ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಕೋಟೆ ಒಡೆದು ಜನಪರ ಆಡಳಿತ ನಡೆಸುವುದು ಸಾಧ್ಯ ಎನ್ನುವುದನ್ನು ದೇವೇಗೌಡ ಸಾಬೀತು ಪಡಿಸಿದರು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಕೆ.ಸತ್ಯನಾರಾಯಣ ಅಭಿಪ್ರಾಯಪಟ್ಟರು.
ದೇವೇಗೌಡರ ರೈತಪರ ಚಿಂತನೆಗಳು ಬದ್ಧತೆಯಿಂದ ಕೂಡಿವೆ ಎಂದು ಕಿ.ರಂ.ನಾಗರಾಜು ಬಣ್ಣಿಸಿದರೆ, ಸಮಕಾಲೀನವಾಗಿ ‘ನಾಡಿನ ರೈತನ ಪರದಾಟ ದೇವೇಗೌಡರ ಅವಿರತ ಹೋರಾಟ’ ಕೃತಿ ಅತ್ಯಂತ ಮುಖ್ಯವಾದುದು ಎಂದು ಪುಸ್ತಕ ಬಿಡುಗಡೆ ಮಾಡಿದ ಮರುಳಸಿದ್ದಪ್ಪ ಹೇಳಿದರು.
ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ದೇವೇಗೌಡ- ಕೃತಿ ಮಾರಾಟದಿಂದ ಬರುವ ಹಣವನ್ನು ನಿಧಿಯಾಗಿ ಪರಿವರ್ತಿಸಿ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೀಡುವುದಾಗಿ ಹೇಳಿದರು.
*
ಕನ್ನಡ ಪುಸ್ತಕೋದ್ಯಮದ ಪ್ರತಿಷ್ಠಿತ ಪ್ರಕಾಶಕ ಸಂಸ್ಥೆಯಾದ ಮನೋಹರ ಗ್ರಂಥಮಾಲೆ ಆ.15ರ ಶುಕ್ರವಾರ ಧಾರವಾಡದಲ್ಲಿ ವಿವಿಧ ಲೇಖಕರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿತ್ತು . ಈ ಕಾರ್ಯಕ್ರಮದಲ್ಲಿ ಕ್ಯಾಲಿಫೋರ್ನಿಯಾದ ಸಾಹಿತ್ಯಾಸಕ್ತರ ಕೂಟ ‘ಸಾಹಿತ್ಯ ಗೋಷ್ಠಿ’ಯ ವಿಶ್ವನಾಥ್ ಹುಲಿಕಲ್‌ರ ‘ಹೃದಯ’ ಕೃತಿ ಬಿಡುಗಡೆಯಾಯಿತು.
ಉದ್ದೇಶಿತ ಗುರಿಗಳಿಂದ ವಿಮುಖವಾಗಿರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಮುಚ್ಚುವುದೇ ಲೇಸು ಎಂದು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದರು.












Click it and Unblock the Notifications