ಬರದಿಂದ ಸರ್ಕಾರ ಕಂಗಾಲು, ಮೈಸೂರು ದಸರಾ ಖಾಸಗಿ ಪಾಲು
ಬರದಿಂದ ಸರ್ಕಾರ ಕಂಗಾಲು, ಮೈಸೂರು ದಸರಾ ಖಾಸಗಿ ಪಾಲು
ಈ ಸಲ ಸರ್ಕಾರದ ಬೊಕ್ಕಸದ ಚಿಕ್ಕಾಸೂ ಉತ್ಸವಕ್ಕೆ ಸಿಗಲ್ಲ
ಈ ಬಾರಿಯೂ ಕರ್ನಾಟಕದಲ್ಲಿ ಭಾರೀ ಬರಗಾಲ ಇರುವುದರಿಂದ ಮೊದಲ ಬಾರಿಗೆ ಖಾಸಗಿಯವರ ಕೈಗೆ ದಸರಾ ಉತ್ಸವದ ಉಸ್ತುವಾರಿ ಕೊಡಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ದಸರಾ ಸಮಿತಿಯನ್ನು ರಚಿಸಿದೆ. ಈ ಸಮಿತಿ ಇಡೀ ಉತ್ಸವದ ಹೊಣೆ ಹೊತ್ತು, ಪ್ರಾಯೋಜಕರನ್ನು ಹುಡುಕಿಕೊಂಡು ತೂಗಿಸಿಕೊಂಡು ಹೋಗಬಲ್ಲ 10 ಇವೆಂಟ್ ಮ್ಯಾನೇಜರ್‌ಗಳ ಪಟ್ಟಿಯನ್ನು ತಯಾರಿಸಿದೆ.
ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ವಿಶ್ವನಾಥ್ ಇತ್ತೀಚೆಗೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಮೈಸೂರು ರಸ್ತೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ದಸರಾ ಆಚರಣಾ ಸಮಿತಿ ಒಟ್ಟು 4 ಕೋಟಿ ರುಪಾಯಿ ಹಣ ಕೇಳಿದೆ. ಇದಲ್ಲದೆ ಉತ್ಸವಕ್ಕೆ ಬೇಕಾದ ಹಣವನ್ನು ಸಂಗ್ರಹಿಸುವ ಕೆಲಸಕ್ಕೂ ಬೇಗ ಚಾಲನೆ ಸಿಗಲಿದೆ ಎಂದು ವಿಶ್ವನಾಥ್ ಹೇಳಿದರು.
ಖಾಸಗಿಯವರ ಕೈಗೆ ಉಸ್ತುವಾರಿ ಕೊಟ್ಟರೂ ಸರ್ಕಾರ ಮಾರ್ಗದರ್ಶಿ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತದೆ. ನವರಾತ್ರಿ ಉತ್ಸವದ ಸಂಪ್ರದಾಯಕ್ಕೆ ಕಿಂಚಿತ್ತೂ ಚ್ಯುತ ಬಾರದಂತೆ ನಿಗಾ ವಹಿಸುತ್ತೇವೆ ಎಂಬ ಭರವಸೆಯನ್ನೂ ಸಚಿವರು ಕೊಟ್ಟರು.
ದಸರಾ ಉತ್ಸವಕ್ಕೆ ಸಂಬಂಧಿಸಿದ ವೆಬ್‌ಸೈಟು ರಚನೆಯ ಹಾದಿಯಲ್ಲಿದೆ.
ಈ ಬಾರಿ ದಸರಾ ಆಚರಣೆಯ ಸಿದ್ಧತೆಗೆ ಪ್ರವಾಸೋದ್ಯಮ ಅಭಿವೃದ್ಧಿಯ ಆಯಾಮ ಕೂಡ ಇದೆ. ಖಾಸಗಿಯವರಿಗೆ ಈ ಉತ್ಸವದ ಉಸ್ತುವಾರಿ ಹುಲ್ಲುಗಾವಲು ಎಂಬುದರಲ್ಲಿ ಅನುಮಾನವಿಲ್ಲ. ಸರ್ಕಾರದ ಹೊಸ ವರಸೆಗೆ ಹೇಗೆ ಪ್ರತಿಕ್ರಿಯೆ ಸಿಗುತ್ತದೋ ನೋಡಬೇಕು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications