ಕುರ್ತಕೋಟಿಗೆ ಪ್ರಾಧಿಕಾರದಿಂದ ವಂಚನೆ
ಕುರ್ತಕೋಟಿಗೆ ಪ್ರಾಧಿಕಾರದಿಂದ ವಂಚನೆ
ಮಲ್ಲೇಪುರಂಗೆ 45 ಸಾವಿರ ಗೌರವಧನ, ಕೀರ್ತಿನಾಥರಿಗೆ ಪಂಗನಾಮ !
ಖ್ಯಾತ ಸಂಶೋಧಕ ಶಂಬಾ ಜೋಷಿ ಅವರ ‘ಮರಾಠಿ ಸಂಸ್ಕೃತಿ ಕೆಲವು ಸಮಸ್ಯೆಗಳು’ ಕೃತಿಯನ್ನು ಕುರ್ತಕೋಟಿ ಅವರು ಅನುವಾದಿಸಿದ್ದು , ಈ ಅನುವಾದಿತ ಕೃತಿಯನ್ನು ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಆದರೆ ಈ ಸಂಬಂಧ ಯಾವುದೇ ರಾಯಧನವನ್ನು ಕುರ್ತಕೋಟಿಯವರಿಗೆ ನೀಡಿಲ್ಲ ಎಂದು ಗ್ರಂಥಮಾಲೆಯ ರಮಾಕಾಂತ ಜೋಷಿ ಸುದ್ದಿ ಪ್ರಕಟಣೆಯಲ್ಲಿ ದೂರಿದ್ದಾರೆ.
ಹಣ ಕೊಡದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಕುರ್ತಕೋಟಿ ಯೋಚಿಸಿದ್ದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಯು.ಆರ್.ಅನಂತಮೂರ್ತಿ ಹಾಗೂ ಕೆ.ವಿ.ಸುಬ್ಬಣ್ಣ ಅವರು- ರಾಯಧನ ನೀಡುವಂತೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ಸೂಚಿಸಿದ್ದರು. ಕುರ್ತಕೋಟಿ ಕೇಳಿದ್ದ 10 ಸಾವಿರ ರುಪಾಯಿ ಗೌರವಧನ ನೀಡಲು ಮಲ್ಲೇಪುರಂ ಕೂಡ ಒಪ್ಪಿಕೊಂಡಿದ್ದರು. ಆದರೆ ಹಣ ಮಾತ್ರ ಬರಲಿಲ್ಲ .
ಶಂಬಾ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಪ್ರಾಧಿಕಾರ ಪ್ರಕಟಿಸಿದೆ. ಈ ಆರು ಸಂಪುಟಗಳ ಸಂಪಾದಕತ್ವವನ್ನು ಪ್ರಾಧಿಕಾರದ ಅಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್ ಅವರೇ ನಿರ್ವಹಿಸಿದ್ದು , ತಮ್ಮ ಕಾರ್ಯಕ್ಕಾಗಿ 45 ಸಾವಿರ ರುಪಾಯಿ ಗೌರವ ಧನ ಪಡೆದಿದ್ದಾರೆ. ಆದರೆ, ಕುರ್ತಕೋಟಿಯವರಿಗೆ ಚಿಕ್ಕಾಸೂ ದೊರೆತಿಲ್ಲ ಎಂದು ರಮಾಕಾಂತ ಜೋಷಿ ವಿಷಾದಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಇಲಾಖೆಯ ನಿರ್ದೇಶಕರು ಇನ್ನು ಮುಂದಾದರೂ ಗೌರವಧನವನ್ನು ಕುರ್ತಕೋಟಿಯವರ ಕುಟುಂಬ ವರ್ಗಕ್ಕೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಷಿ ಒತ್ತಾಯಿಸಿದ್ದಾರೆ.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಕುರ್ತಕೋಟಿ ವಿಮರ್ಶೆಯ ಮಾದರಿ ಹೀಗಿತ್ತು ...
ಹರಿ ಮನೆಯಲ್ಲಿ ಕೀರ್ತಿನಾಥರ ಸ್ಮರಣೆ
ಮುಖಪುಟ / ವಾರ್ತೆಗಳು












Click it and Unblock the Notifications