ವೀರಪ್ಪನ್ ಶಿಕಾರಿಯ ಎಸ್‌ಟಿಎಫ್ ಪೊಲೀಸರಿಗೆ ವೈರಲ್ ಫೀವರ್
ವೀರಪ್ಪನ್ ಶಿಕಾರಿಯ ಎಸ್‌ಟಿಎಫ್ ಪೊಲೀಸರಿಗೆ ವೈರಲ್ ಫೀವರ್
ಕಾಡಿನಲ್ಲಿನ ನೀರು ಕುಡಿದು ಅನಾರೋಗ್ಯ, ಮಳೆಗಾಲದ ರೋಗಗಳಿಂದ ತತ್ತರ
ಒಂದು ಸಾವಿರ ಮಂದಿ ಕಟ್ಟು ಮಸ್ತಾದ ಎಸ್‌ಟಿಎಫ್ ಪೊಲೀಸ್ ಪಡೆಯಲ್ಲಿ ಈಗಾಗಲೇ 20 ಮಂದಿ ಪೊಲೀಸರು ವೈರಲ್ ಫೀವರ್‌ನಿಂದ ಹಾಸಿಗೆ ಹಿಡಿದಿದ್ದಾರೆ. ದುರ್ಗಮ ಕಾಡಿನಲ್ಲಿ ಕಾರ್ಯಾಚರಣೆ ನಡೆಸುವ ಪೊಲೀಸರು ಅಲ್ಲಿ ಸುರಿಯುತ್ತಿರುವ ಮಳೆಯಿಂದ ಹಾಗೂ ಮಳೆಗಾಲದಲ್ಲಿ ಸಾಮಾನ್ಯವಾಗಿರುವ ರೋಗಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಶೀತ , ನೆಗಡಿ ಕೆಮ್ಮುಗಳಿಂದ ಹೆಚ್ಚಿನ ಪೊಲೀಸರು ಬಳಲುತ್ತಿದ್ದಾರೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಕಾಡಿನಲ್ಲಿನ ನಿಂತ ನೀರು ಕುಡಿದಿರುವುದರಿಂದ ಹತ್ತಿಕೊಂಡ ಜ್ವರ ಇತರ ಪೊಲೀಸ್ ಅಧಿಕಾರಿಗಳಿಗೂ ಬಂದಿರುವ ಸಾಧ್ಯತೆಯನ್ನು ಎಸ್‌ಟಿಎಫ್ ಪಡೆಯ ಅಧಿಕಾರಿಗಳು ಅಲ್ಲಗಳೆಯುತ್ತಿಲ್ಲ. ಯಾಕೆಂದರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಅತ್ಯಂತ ಕಡಿಮೆ ಲಗ್ಗೇಜ್ ಕೊಂಡೊಯ್ಯುವ ಪೊಲೀಸರು ನೀರಿಗಾಗಿ ಝರಿ ತೊರೆಗಳನ್ನು ಅವಲಂಬಿಸುವುದು ಸಾಮಾನ್ಯ.
ವೀರಪ್ಪನ್‌ನನ್ನು ಹಿಡಿಯುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಎಸ್‌ಟಿಎಫ್ ಅಧಿಕಾರಿಗಳು ನಿಟ್ಟುಸಿರು ಬಿಡುತ್ತಾರೆ. ಈ ಕಾಡು ಒಂದೆರಡು ದಿನ ಟ್ರೆಕ್ಕಿಂಗ್‌ಗೆ ಸೂಕ್ತವೇ ಹೊರತು ವರ್ಷಗಟ್ಟಲೆ ಕಾರ್ಯಾಚರಣೆ ನಡೆಸುವುದಕ್ಕಲ್ಲ. ಇಲ್ಲಿನ ಸೊಳ್ಳೆಗಳು, ಕಾಡು ಪ್ರಾಣಿಗಳಿಂದ ಬಚಾವ್ ಆಗಿ ಬದುಕುವುದು ಕಷ್ಟ. ನಮಗೂ ಎಲ್ಲರಂತೆ ನಾಡಿನ ಬದುಕು ಬೇಕು. ಅದಕ್ಕಾದರೂ ಈ ಕಾರ್ಯಾಚರಣೆ ಆದಷ್ಟು ಬೇಗ ಮುಗಿಯಲಿ ಎಂದು ಹಾರೈಸುತ್ತಿದ್ದೇವೆ ಎನ್ನುತ್ತಾರೆ.
ಅಸಹಕಾರ ತೋರುವ ಬುಡಕಟ್ಟು ಜನಾಂಗದವರು, ವೀರಪ್ಪನ್ ಜೊತೆಗೆ ಕೈ ಜೋಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲೆತ್ನಿಸುವ ತಮಿಳು ಉಗ್ರವಾದಿಗಳು, ವೀರಪ್ಪನ್ ಅಡಗುದಾಣದ ಬಗ್ಗೆ ಲಭ್ಯವಾಗದೇ ಇರುವ ಗುಪ್ತ ವರದಿಗಳು ವೀರಪ್ಪನ್ ಶಿಕಾರಿಯನ್ನು ನಿಧಾನಗೊಳಿಸಿವೆ ಎಂಬುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.
ಆದ್ದರಿಂದ ಒಂದರ ಮೇಲೊಂದರಂತೆ ಭೀಮನ ಅಮಾವಾಸ್ಯೆಗಳು ಉರುಳಿದರೂ ವೀರಪ್ಪನ್ ಬಲೆಗೆ ಬೀಳುತ್ತಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್












Click it and Unblock the Notifications