ಹೊಸ ರಫ್ತು ನೀತಿ, ವಹಿವಾಟು ಸುಸೂತ್ರಕ್ಕೆ ಇ-ಆಡಳಿತ
ಬೆಂಗಳೂರು : 2007ನೇ ಇಸವಿ ಹೊತ್ತಿಗೆ 12.07 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ರಫ್ತು ವಹಿವಾಟು ನಡೆಸುವ ಉಮೇದಿನಿಂದ ಕರ್ನಾಟಕ ಸರ್ಕಾರ ಶುಕ್ರವಾರ (ಜ.24) ಹೊಸ ರಫ್ತು ಉತ್ತೇಜಕ ನೀತಿಯನ್ನು ಪ್ರಕಟಿಸಿದೆ.
ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್.ವಿ.ದೇಶಪಾಂಡೆ ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಹೊಸ ನೀತಿಯನ್ನು ಘೋಷಿಸಿದರು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಅರುಣ್ ಶೌರಿ ಮತ್ತು ವಿದೇಶೀ ಉದ್ದಿಮೆಯ ಪ್ರಧಾನ ನಿರ್ದೇಶಕ ಎಲ್.ಮಾನ್‌ಸಿಂಗ್ ಸಮಾರಂಭದಲ್ಲಿ ಭಾಗವಹಿಸಿದ್ದರು.
ನೂತನ ರಫ್ತು ನೀತಿಯನ್ನು ಪ್ರಕಟಿಸಿ ಮಾತನಾಡಿದ ದೇಶಪಾಂಡೆ, 2001- 02ನೇ ಇಸವಿಯಲ್ಲಿ ಕರ್ನಾಟಕ 20.145 ಕೋಟಿ ರುಪಾಯಿಯಷ್ಟು ರಫ್ತು ವಹಿವಾಟು ನಡೆಸಿದೆ. ಇದಕ್ಕಿಂತ ಹಿಂದಿನ ವರ್ಷದ ರಫ್ತಿನ ಪ್ರಮಾಣಕ್ಕಿಂತ ಇದು ಪ್ರತಿಶತ 26ರಷ್ಟು ಹೆಚ್ಚಾಗಿದೆ. ದೇಶದ ಒಟ್ಟು ರಫ್ತಿನಲ್ಲಿ ಕರ್ನಾಟಕದ ಪಾಲು ಶೇ.7 ರಷ್ಟಿದೆ. 2007ನೇ ಇಸವಿ ಹೊತ್ತಿಗೆ ಇದನ್ನು ಶೇ.15 ರಷ್ಟಾಗಿಸುವುದು ನಮ್ಮ ಗುರಿ ಎಂದರು.
ಅಂತರರಾಷ್ಟ್ರೀಯ ಉದ್ದಿಮೆಗೆ ಇ- ಆಡಳಿತ :
ಅಂತರರಾಷ್ಟ್ರೀಯ ಉದ್ದಿಮೆಗೆ ಅಗತ್ಯವಿರುವ ಇ- ಆಡಳಿತ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಟ್ರೇಡ್ ಸೆಂಟರ್ (ವಿಐಟಿಸಿ) ನಲ್ಲಿ ಕಲ್ಪಿಸಲಾಗುವುದು. ರಾಜ್ಯದ ಸಣ್ಣ ಉದ್ದಿಮೆಗಳೂ ಆನ್‌ಲೈನ್ ವಹಿವಾಟು ನಡೆಸಲು ಅನುವಾಗುವಂತಹ ಬಿ2ಬಿ ವಿನಿಮಯ ವ್ಯವಸ್ಥೆ ಕೂಡ ಇ- ಆಡಳಿತದಲ್ಲಿ ಸೇರಿರುತ್ತದೆ ಎಂದು ದೇಶಪಾಂಡೆ ಹೇಳಿದರು.
ಹೊಸ ನೀತಿಯನ್ವಯ-
- ಮಾರುಕಟ್ಟೆ ಅಭಿವೃದ್ಧಿ ಸಹಾಯ ಯೋಜನೆ ಅಡಿಯಲ್ಲಿ 1 ಕೋಟಿ ರುಪಾಯಿ ಮೂಲ ಬಂಡವಾಳವನ್ನು ಸರ್ಕಾರ ಹೂಡಲಿದೆ.
- ಉತ್ತಮ ಟ್ರ್ಯಾಕ್ ರೆಕಾರ್ಡ್ ಇರುವ ರಫ್ತುದಾರರಿಗೆ ಹಸುರು ಕಾರ್ಡ್ ನೀಡಲಾಗುವುದು. ಇದರಿಂದ ರಫ್ತು ಪ್ರಕ್ರಿಯೆ ಅಡಚಣೆಯಿಲ್ಲದೆ ಸರಾಗವಾಗಲಿದೆ.
- ರಫ್ತು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ರಫ್ತು ಉತ್ತೇಜಕ ಸಮಿತಿಯನ್ನು ಪ್ರತಿ ಜಿಲ್ಲೆಯಲ್ಲೂ ಸ್ಥಾಪಿಸಲಾಗುವುದು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications