ಕುದುರೆಮುಖ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ಅಣ್ಣತಮ್ಮರು !
*ದಟ್ಸ್‌ಕನ್ನಡ ಬ್ಯೂರೋ
ರಜೆ. ಹಾಗೇ ಸುತ್ತಾಡುವುದು, ಟೂರ್ ಹೋಗುವುದು, ಚಾರಣ ಹೋಗುವುದು, ಹಸಿರ ಸೊಬಗು ನೋಡುವುದು ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ. ಅದರಲ್ಲಿಯೂ ರಾಷ್ಟ್ರೀಯ ಉದ್ಯಾನವನಗಳನ್ನು ನೋಡುವುದೆಂದರೆ ತುಂಬ ಖುಷಿ. ಕಾಂಕ್ರೀಟು ಕಾಡುಗಳ ನಡುವೆ ಬದುಕುವವರಿಗೆ ಹಸಿರ ನೋಡುವ ಹಂಬಲ.
ಪ್ರಯಾಣ ಹೊರಡುವಾಗ ಕಳ್ಳಕಾಕರ, ಪಿಕ್ ಪಾಕೆಟ್ ಮಾಡುವವರ ಹಾಗೂ ದಗಾಕೋರರ ಬಗ್ಗೆ ಎಷ್ಟು ಜಾಗರೂಕರಾಗಿದ್ದರೂ ಸಾಲದು ಅನ್ನುವುದು ಮಾಮೂಲಿ ಎಚ್ಚರಿಕೆ. ಆದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವವರು ಕಳ್ಳಕಾಕರ ಬಗ್ಗೆ ಜಾಗ್ರತೆಯಿಂದಿದ್ದರಷ್ಟೇ ಸಾಲದು; ಅರಣ್ಯಾಧಿಕಾರಿಗಳ ಬಗ್ಗೆಯೂ ಎಚ್ಚರಿಕೆಯಿಂದಿರಬೇಕು.
ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಮೋಸ ತುಂಬಿಕೊಂಡಿದೆ. ಅರಣ್ಯ ಇಲಾಖೆ ರೂಪಿಸಿದ ಕಾನೂನುಗಳನ್ನು ಅರಣ್ಯ ಸಂರಕ್ಷಣಾಧಿಕಾರಿಗಳು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದೇ ಪ್ರವಾಸಿಗಳ ನೆಮ್ಮದಿಯನ್ನು ಕೆಡಿಸಿರುವುದು.
ಚೆಕ್ ಪೋಸ್ಟ್ ಗಾರ್ಡ್‌ಗಳು, ಮಾರ್ಗದರ್ಶನ ಮಾಡಲಿರುವ ಅರಣ್ಯಾಧಿಕಾರಿಗಳು ಪ್ರವಾಸಿಗರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎನ್ನುವ ದೂರು ವ್ಯಾಪಕವಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಬೃಹತ್ ವಿಸ್ತಾರದ್ದು. 600 ಚದರ ಕಿಲೋಮೀಟರ್ ವಿಶಾಲವಾಗಿದೆ. ಈ ದಟ್ಟ ಕಾಡಿನೊಳಗೆ ಎಲ್ಲರಿಗೂ ಪ್ರವೇಶವಿಲ್ಲ. ಪ್ರವೇಶ ನಿಯಂತ್ರಣದ ಲಗಾಮು ಇರುವುದು ಅರಣ್ಯಾಧಿಕಾರಿಗಳ ಕೈಯಲ್ಲಿ.
ಸ್ವಂತ ಅಥವಾ ಬಾಡಿಗೆ ವಾಹನಗಳಲ್ಲಿ ಬರುವ ಪ್ರವಾಸಿಗಳು ಕಾಡಿನೊಳಕ್ಕೆ ಹೋಗಬೇಕಿದ್ರೆ ಅಧಿಕಾರಿಗಳ ಅಪ್ಪಣೆ ಪಡೆಯಬೇಕು. ನಿಯಂತ್ರಣಾಧಿಕಾರಿಗಳು ಪಾಸ್ ಕೊಟ್ಟ ನಂತರವೇ ಗಾಡಿಗಳು ಕಾಡಿನೊಳಕ್ಕೆ ತೂರಬಹುದು. ಈ ಪಾಸ್ ಮೇಲೆ ವಿವಿಧ ರೀತಿಯ ರೂಲ್ಸ್‌ಗಳನ್ನು ನಮೂದಿಸಲಾಗಿದೆ. ಅವುಗಳನ್ನು ಅರಣ್ಯಾಧಿಕಾರಿಗಳು ತಮ್ಮ ಸ್ವಂತ ಲಾಭಕ್ಕಾಗಿ ತೋಚಿದಂತೆ ಬಳಸಿಕೊಳ್ಳುತ್ತಾರೆ ಎಂಬುದು ಅನೇಕ ಪ್ರವಾಸಿಗರ ದೂರು.
ಮೋಸ ಹೇಗೆ ನಡೆಯುತ್ತದೆ ?
ಪರಿಸರ ಸಮತೋಲನ ಹಾಳಾಗದೇ ಇರಲಿ ಎಂಬ ಮುನ್ನೆಚ್ಚರಿಕೆಯಿಂದ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸ್ತವ್ಯ ಹೂಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಉದ್ಯಾನವನದೊಳಗೆ ಅಡ್ಡಾಡಲು ಸಮಯ ನಿರ್ಬಂಧವಿದೆ. ನಿರ್ದಿಷ್ಟ ಸಮಯದ ನಂತರ ವಾಹನಗಳಿಗೆ ಪ್ರವೇಶವಿಲ್ಲ. ಉದಾಹರಣೆಗೆ ದ್ವಿಚಕ್ರ ವಾಹನಗಳಲ್ಲಿ ಬಂದವರು ಕಾಡಿನೊಳಗೆ ಒಂದು ಗಂಟೆಗಿಂತ ಹೆಚ್ಚು ಹೊತ್ತು ಇರುವ ಹಾಗಿಲ್ಲ. ಕಾರುಗಳಾದರೆ ಒಂದೂವರೆ ಗಂಟೆ ಹೊತ್ತು ಕಾಡಿನೊಳಗೆ ಸುತ್ತಬಹುದು. ಶೃಂಗೇರಿಯಿಂದ ಕಾಡಿನೊಳಗೆ ಹೊಗುವ ಗಾಡಿಗಳು ಕಳಸದಲ್ಲಿ ಕಾಡಿನಿಂದ ಹೊರಗೆ ಬರಬೇಕು.
ಆದರೆ ಈ ಅವಧಿ ತುಂಬಾ ಕಡಿಮೆಯಾಯಿತು. ಕಾಡಿನ ಸೊಬಗನ್ನು ಸವಿಯಲು, ಅನುಭವಿಸಲು ಇಷ್ಟು ಚಿಕ್ಕ ಅವಧಿ ಸಾಲದು ಎಂಬುದು ಪ್ರವಾಸಿಗರ ದೂರು. ಅಲ್ಲದೆ ಆ ಮರ, ಈ ಗಿಡ, ಅಲ್ಲೊಂದು ಪ್ರಾಣಿ, ಇಲ್ಲೊಂದು ನವಿಲು.. ಅಂತ ನೋಡಿಕೊಂಡು, ಹಸಿರ ಸೊಬಗ ಸವಿದು ಕಳಸ ಗೇಟ್ ತಲುಪುವ ಹೊತ್ತಿಗೆ ನಿಗದಿ ಮಾಡಿದ ಅವಧಿ ಮೀರಿ ಹೋಗಿರುತ್ತದೆ.
ಅಸಲಿಗೆ ಈ ರೂಲ್ಸ್‌ಗಳೇ ಸರಿಯಿಲ್ಲ. 45 ಕಿಲೋಮೀಟರ್ ದೂರವನ್ನು ಒಂದು ಗಂಟೆಯಲ್ಲಿ ಕ್ರಮಿಸಬೇಕು. ಆದರೆ ವಾಹನದ ವೇಗ 40 ಕಿಮೀ/ಗಂಟೆ ದಾಟುವ ಹಾಗಿಲ್ಲ. ಅಂದ ಮೇಲೆ ಡೆಡ್‌ಲೈನ್ ಮುಟ್ಟುವುದಕ್ಕಾಗುತ್ತದಾ ? ಪ್ರವಾಸಿಗರು ಸಮಯ ಮೀರಿ ಬರಲಿ, ಹಾಗೆ ಬಂದು ಫೈನ್ ಕಟ್ಟಲಿ ಎಂದೇ ಅರಣ್ಯಾಧಿಕಾರಿಗಳು ಹಾರೈಸುತ್ತಾರಾ ?
ಈ ಎಲ್ಲ ಅವ್ಯವಸ್ಥೆಯ ಪರಿಣಾಮ ಎಂದರೆ ಅರಣ್ಯಾಧಿಕಾರಿಗಳಿಗೆ ಪ್ರವಾಸಿಗರು ಹಣ ತೆರಬೇಕು... ತಡವಾಗಿ ಬಂದುದಕ್ಕೆ ಅಥವಾ ಸ್ಪೀಡಾಗಿ ಗಾಡಿ ಓಡಿಸಿದ್ದಕ್ಕೆ ಅಂತ 100 ರೂಪಾಯಿ ಫೈನ್ ಅರಣ್ಯಾಧಿಕಾರಿಯ ಕೈಗೆ ಹಾಕಬೇಕು. ಹತ್ತು ನಿಮಿಷ ತಡವಾಗಿ ಬಂದರೂ ಫೈನ್‌ನಿಂದ ವಿನಾಯಿತಿ ಇಲ್ಲ.
ಈ ಫೈನ್ ಹಣಕ್ಕೆ ರಸೀತಿ ಬಂದರೆ ಬಂತು ಇಲ್ಲದಿದ್ದರೆ ಇಲ್ಲ !
ಈ ಸಮಯ ನಿರ್ಬಂಧದ ಬಗ್ಗೆ ಪ್ರವಾಸಿಗರಿಗೆ ಸರಿಯಾದ ಪೂರ್ವ ಮಾಹಿತಿಯೂ ಇಲ್ಲ . ಅಲ್ಲದೆ ಈ ಬಗ್ಗೆ ಇರುವ ಸೂಚನೆಗಳು ಕೂಡ ಇಂಗ್ಲಿಷ್‌ನಲ್ಲಿವೆ. ಇತರ ಎಲ್ಲ ಮಾಹಿತಿಗಳು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿವೆ. ಡ್ರೆೃವರ್‌ಗಳಿಗೆ ಇಂಗ್ಲಿಷ್ ಓದುವುದಕ್ಕೆ ಬಂದರೆ ಬಚಾವ್. ಇಲ್ಲವಾದರೆ ಗೇಟ್‌ನಿಂದ ಆಚೆ ಬರುವಾಗ ಅರಣ್ಯಾಧಿಕಾರಿ ಹೇಳಿದ್ದೇ ಮಹಾನ್ ಸತ್ಯ. ಡ್ರೆೃವರ್ ಅಪರಾಧಿ ಭಾವದಿ ಮುದುಡಿ ಹೋಗಬೇಕು.
ರೂಲ್ಸುಗಳನ್ನೆಲ್ಲ ಕಾಡುಪಾಲು ಮಾಡಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನು ತಿರುಚಿಕೊಳ್ಳುವ ಈ ಅಧಿಕಾರಿಗಳು ವೀರಪ್ಪನ್ ಅಣ್ಣತಮ್ಮಂದಿರು ಅನ್ನಿಸಿದರೆ ಆಶ್ಚರ್ಯವೇನು ?
ನೀವೇನಂತೀರಿ...?
ಪೂರಕ ಓದಿಗೆ
ಕುದುರೆಮುಖ, ಕೆಮ್ಮಣ್ಣುಗುಂಡಿ, ನಂದಿ...
ಮುಖಪುಟ / ನೋಡು ಬಾ ನಮ್ಮೂರ












Click it and Unblock the Notifications