ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಈವರೆಗೆ 20.03 ಟಿಎಂಸಿ ನೀರು ಬಿಟ್ಟಿದೀವಿ’

By Staff
|
Google Oneindia Kannada News

ಬೆಂಗಳೂರು : ಕಾವೇರಿ ನೀರಿನ ವಿಷಯದಲ್ಲಿ ಕರ್ನಾಟಕದ ವಿರುದ್ಧ ತಮಿಳುನಾಡು ಸುಪ್ರಿಂಕೋರ್ಟ್‌ಗೆ ಸಲ್ಲಿಸಿರುವ ನ್ಯಾಯಾಲಯ ನಿಂದನೆ ಅರ್ಜಿಯ ವಿಚಾರಣೆಗೆ ಇನ್ನು ಎರಡೇ ದಿನ ಉಳಿದಿದೆ. ಕೋರ್ಟಿನ ಆದೇಶವನ್ನು ತಾನು ಚಾಚೂ ತಪ್ಪದೆ ಪಾಲಿಸಿರುವುದಾಗಿ ಕರ್ನಾಟಕ ಸರ್ಕಾರ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಜಲ ಸಂಪನ್ಮೂಲ ಸಚಿವ ಎಚ್‌.ಕೆ.ಪಾಟೀಲ್‌ ಕೊಟ್ಟ ವಿವರಗಳ ಸಂಕ್ಷಿಪ್ತ ಸಾರ ಈ ರೀತಿ ಇದೆ-
ಅಕ್ಟೋಬರ್‌ 28ರಿಂದ ಇದುವರೆಗೆ ಮೆಟ್ಟೂರು ಜಲಾಶಯಕ್ಕೆ 20.03 ಟಿಎಂಸಿ ಅಡಿ ಕಾವೇರಿ ನೀರನ್ನು ಬಿಟ್ಟಿದ್ದೇವೆ. ಕಾವೇರಿ ವ್ಯಾಜ್ಯಗಳ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನ ಅನ್ವಯ ನವೆಂಬರ್‌ ತಿಂಗಳಲ್ಲಿ ತಮಿಳುನಾಡಿಗೆ ರಾಜ್ಯದಿಂದ ಹರಿಯಬೇಕಾದ ಒಟ್ಟು ನೀರು 16 ಟಿಎಂಸಿ. ನಾವು ಈಗಾಗಲೇ ನವೆಂಬರ್‌ನಲ್ಲಿ 14.9 ಟಿಎಂಸಿ ನೀರು ಬಿಟ್ಟಿದ್ದೇವೆ.

ಕೃಷ್ಣರಾಜ ಸಾಗರದಿಂದ ತಮಿಳುನಾಡಿಗೆ ದಿನಂಪ್ರತಿ ನೀರಿನ ಹರಿವು 3800 ಕ್ಯೂಸೆಕ್ಸ್‌ಗಳಷ್ಟಿದೆ. ನವೆಂಬರ್‌ 15ನೇ ತಾರೀಕು ನಾವು ಬಿಟ್ಟಿರುವ ನೀರಿನ ಸಂಪೂರ್ಣ ವಿವರಗಳನ್ನು ಸುಪ್ರಿಂಕೋರ್ಟ್‌ಗೆ ಒದಗಿಸಲಿದ್ದೇವೆ. ಈ ಅಂಕಿ- ಅಂಶಗಳನ್ನು ತಮಿಳು ನಾಡೇ ಸಂಗ್ರಹಿಸಿ, ನಮಗೆ ಕೊಟ್ಟಿದೆ. ಬಿಳಿಗುಂಡ್ಲುವಿನಲ್ಲಿರುವ ಕೇಂದ್ರ ಜಲ ಸಮಿತಿಯ ಮಾಪನಾ ಕೇಂದ್ರದವರು ಕೊಟ್ಟಿರುವ ಮಾಹಿತಿ ಇದಲ್ಲ.

ತಮಿಳುನಾಡಲ್ಲಿ ಈಗ ಸಾಕಷ್ಟು ಮಳೆಯಾಗುತ್ತಿದ್ದು, ಮೆಟ್ಟೂರು ಜಲಾಶಯದ ಬಾಗಿಲುಗಳನ್ನು ಮುಚ್ಚಿರುವ ಮಾಹಿತಿ ನಮಗೆ ಸಿಕ್ಕಿದೆ. ಈಗ ತಮಿಳುನಾಡಿನ ನೀರಿನ ಸಮಸ್ಯೆ ಸಾಕಷ್ಟು ತೀರಿದೆ. ಈ ನಡುವೆ, ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯುವಂತೆ ಪ್ರಧಾನಿ ವಾಜಪೇಯಿ ಅವರಿಗೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ 6 ಪತ್ರಗಳನ್ನು ಬರೆದಿದ್ದರೂ, ಒಂದಕ್ಕೂ ಉತ್ತರ ಬಂದಿಲ್ಲ. ಪ್ರಾಧಿಕಾರದ ಸಭೆ ಯಾವಾಗ ನಡೆಯುತ್ತದೆ ಅನ್ನುವುದು ಇನ್ನೂ ಗೊತ್ತಿಲ್ಲ.

ಮಹದಾಯಿ ಯೋಜನೆ ಅನುಮತಿಗೆ ಆಗ್ರಹ : ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತ ಕುಮಾರ್‌ ಹಾಗೂ ನಾನು ಕೇಂದ್ರದ ನಗರ ಜಲ ಸಂಪನ್ಮೂಲ ಸಚಿವ ಅರುಣ್‌ ಚರಣ್‌ ಸೇಥಿ ಅವರನ್ನು ಮಂಗಳವಾರ ಸಂಪರ್ಕಿಸಿ, ಮಹದಾಯಿ ಯೋಜನೆಗೆ ಕ್ಷಿಪ್ರವಾಗಿ ಅನುಮತಿ ನೀಡುವಂತೆ ಒತ್ತಾಯಿಸಿದ್ದೇವೆ. ಮಹದಾಯಿ ಜಲಾನಯನ ಪ್ರದೇಶದಲ್ಲಿ 200ರಿಂದ 300 ಟಿಎಂಸಿ ಅಡಿ ನೀರಿದ್ದರೂ, ಇದರಲ್ಲಿ ಒಂದು ಪ್ರತಿಶತ ಪ್ರಮಾಣವನ್ನೂ ವಿದ್ಯುದುತ್ಪಾದನೆಗಾಗಲೀ, ಕೃಷಿಗಾಗಲೀ ಬಳಸುತ್ತಿಲ್ಲ. 87 ಕಿ.ಮೀ. ಉದ್ದದ ನದಿ ಬಗಲು ಪ್ರದೇಶದಲ್ಲಿ 35 ಕಿ.ಮೀ. ಕರ್ನಾಟಕಕ್ಕೆ ಸೇರುತ್ತದೆ. ಯೋಜನೆಗೆ ಅನುಮತಿ ದೊರೆತಲ್ಲಿ ಹುಬ್ಬಳ್ಳಿ- ಧಾರವಾಡದ ನೀರಿನ ಸಮಸ್ಯೆ ಪರಿಹಾರವಾದೀತು.

(ಪಿಟಿಐ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X