ಕಾವೇರಿ ಪ್ರತಿಭಟನೆ : ಈಗ ಜಯಾ ಪಾಳಿ, ಬುಧವಾರ ತಮಿಳುನಾಡು ಬಂದ್
ಚೆನ್ನೈ : ಪ್ರತಿನಿತ್ಯ 9 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂಬ ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಪಾಲಿಸಬೇಕೆಂಬ ಸುಪ್ರಿಂಕೋರ್ಟ್ ನಿರ್ದೇಶನವನ್ನು ಧಿಕ್ಕರಿಸಿರುವ ಕರ್ನಾಟಕದ ನಿಲುವನ್ನು ಖಂಡಿಸಿ ಬುಧವಾರ (ಅ. 9) ತಮಿಳುನಾಡು ಬಂದ್‌ಗೆ ಜಯಲಲಿತಾ ಕರೆ ನೀಡಿದ್ದಾರೆ. ಈ ಬಂದ್‌ಗೆ ಸರ್ವ ಪಕ್ಷಗಳ ಬೆಂಬಲವಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ಮಂಗಳವಾರ ನಡೆದ ತಮಿಳುನಾಡು ಸರ್ವ ಪಕ್ಷಗಳ ಸಭೆಯಲ್ಲಿ ಬಂದ್ ನಡೆಸುವ ನಿರ್ಣಯಕ್ಕೆ ಬರಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಜಯಾ ಮಾತಾಡಿದ್ದು ಹೀಗೆ...
ಈ ಬಂದ್‌ನಿಂದ ನಮಗೆ ಪೂರ್ತಿ ನ್ಯಾಯ ಸಿಗುವುದಿಲ್ಲ ಅನ್ನೋದು ನಮಗೆ ಗೊತ್ತು. ಹಾಗಂತ ಸುಮ್ಮನೆ ಕೂರಲು ಆಗುವುದಿಲ್ಲ. ಪ್ರಧಾನಿ ವಾಜಪೇಯಿ ಈ ಸಮಸ್ಯೆ ವಿಷಯದಲ್ಲಿ ಕೈತೊಳೆದುಕೊಂಡುಬಿಟ್ಟಿದ್ದಾರೆ. ಕೇಂದ್ರ ಸರ್ಕಾರ ಹೀಗೆ ಕೈಚೆಲ್ಲಿ ಕೂರುತ್ತಿರುವುದು ಪ್ರಜಾಪ್ರಭುತ್ವದ ದೊಡ್ಡ ದುರಂತ. ನಮಗೆ ಸುಪ್ರಿಂಕೋರ್ಟ್ ಬಿಟ್ಟರೆ ಬೇರೆ ದಾರಿ ಕಾಣುತ್ತಿಲ್ಲ. ಅಕ್ಟೋಬರ್ 8ನೇ ತಾರೀಖು ಕರ್ನಾಟಕದ ವಿರುದ್ಧ ಸುಪ್ರಿಕೋರ್ಟ್‌ಗೆ ಇನ್ನೊಂದು ನ್ಯಾಯಾಲಯ ನಿಂದನೆ ಅರ್ಜಿಯನ್ನು ಹಾಕುತ್ತೇವೆ. ಸುಪ್ರಿಂಕೋರ್ಟ್ ಆದೇಶವನ್ನು ಕರ್ನಾಟಕ ಉಲ್ಲಂಘಿಸಿರುವುದರಿಂದ ಹಾಳಾಗಿರುವ ತಮಿಳುನಾಡಿನ ಬೆಳೆಗಳ ವಿವರಗಳನ್ನೂ ಆ ನಂತರ ಒದಗಿಸಲಿದ್ದೇವೆ.
ಕರ್ನಾಟಕ ಸರ್ಕಾರವನ್ನು ವಜಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡರೂ, ಅದು ಕಿವಿಮೇಲೆ ಹಾಕಿಕೊಳ್ಳಲಿಲ್ಲ. ತಮಿಳುನಾಡಿನ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಲೇ ಇದೆ. ಹೀಗಾಗಿ ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳಬೇಕಿದೆ. ಇದರ ಮೊದಲ ಹೆಜ್ಜೆಯೇ ತಮಿಳುನಾಡು ಬಂದ್. ಸರ್ವ ಪಕ್ಷಗಳೂ ಬೆಂಬಲಿಸಿರುವ ಈ ಬಂದನ್ನು ಶಾಂತ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತೇವೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ












Click it and Unblock the Notifications