ತವರೂರ ರೈತರ ಒತ್ತಾಯ : ಕೃಷ್ಣ ಪಾದಯಾತ್ರೆಗೆ ಮಂಗಳ?
ಮಾಯಗಾನಹಳ್ಳಿ : ತಮ್ಮ ತವರು ಜಿಲ್ಲೆ ಮಂಡ್ಯದ ರೈತರೇ ಪಾದಯಾತ್ರೆಯನ್ನು ನಿಲ್ಲಿಸಿ ಎಂದು ಆಗ್ರಹಿಸುತ್ತಿರುವುದರಿಂದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕಾಲುನಡಿಗೆ ಬುಧವಾರ ನಿಲ್ಲುವ ಸಂಭವ ಕಾಣಿಸುತ್ತಿದೆ. ತಮ್ಮ ಹಿರಿಯ ಸಹೋದ್ಯೋಗಿಗಳ ಜೊತೆ ಮಂಗಳವಾರ ರಾತ್ರಿ ಚರ್ಚಿಸಿ, ಈ ಬಗ್ಗೆ ನಿರ್ಣಯ ಕೈಗೊಳ್ಳುವ ಇಂಗಿತವನ್ನು ಕೃಷ್ಣ ವ್ಯಕ್ತಪಡಿಸಿದ್ದಾರೆ.
ಬಿಡದಿಯಿಂದ ರಾಮನಗರದತ್ತ ಮಂಗಳವಾರ ಪಾದಯಾತ್ರೆ ಮುಂದುವರೆಸಿದ ಮುಖ್ಯಮಂತ್ರಿ ಕೃಷ್ಣ, ಮಧ್ಯಾಹ್ನದ ಊಟದ ವಿರಾಮದ ವೇಳೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಟೀಕೆಗಳನ್ನು ಮಾಡೋಕೆ ಸ್ವಾತಂತ್ರ್ಯವಿದೆ. ಅದು ಅವರವರಿಗೆ ಬಿಟ್ಟ ವಿಚಾರ. ರಾಜ್ಯ ಶಾಂತ ಸ್ಥಿತಿಗೆ ಮರಳಬೇಕು ಎಂಬುದು ನನ್ನ ಮೂಲ ಆಶಯ. ನಾನು ಹಿರಿಯ ಮಿತ್ರರ ಜೊತೆ ಚರ್ಚಿಸಿದ ನಂತರವೇ ಪಾದಯಾತ್ರೆಯನ್ನು ಕೈಗೊಂಡಿದ್ದು. ಇದಕ್ಕೆ ಅಪಾರ ಜನ ಬೆಂಬಲ ಸಿಕ್ಕಿತು. ಅದೇ ನನ್ನ ಕಾಲುಗಳಿಗೆ ಮತ್ತು ಕೀಲುಗಳಿಗೆ ಬಲ ಕೊಟ್ಟಿತು. ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಒಗ್ಗಟ್ಟಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾನು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತಿದೆ. ಮಂಗಳವಾರ ರಾತ್ರಿ ಹಿರಿಯರ ಜೊತೆ ಚರ್ಚಿಸಿ, ಪಾದಯಾತ್ರೆಯನ್ನು ಮುಂದುವರೆಸಬೇಕೋ ಅಥವಾ ಹಿಂದಕ್ಕೆ ಪಡೆಯಬೇಕೋ ಎಂದು ತೀರ್ಮಾನಿಸುತ್ತೇನೆ ಎಂದರು.
ಮಾಜಿ ಸಂಸದ ಜಿ.ಮಾದೇಗೌಡ, ಕಬಿನಿ ರೈತ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಮಂಡ್ಯದ ಕಾಂಗ್ರೆಸ್ ಶಾಸಕ ಎಂ.ಸ್.ಆತ್ಮಾನಂದ ಪಾದಯಾತ್ರೆಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು. ಈ ಪಾದಯಾತ್ರೆಯಿಂದ ರಾಜಕೀಯವಾಗಿ ಜನರನ್ನು ಒಡೆಯುವ ಅಪಾಯವಿರುವುದರಿಂದ ಪಾದಯಾತ್ರೆ ನಿಲ್ಲಿಸುವುದೇ ಒಳಿತು ಎಂಬುದು ಇವರೆಲ್ಲರ ಅಭಿಪ್ರಾಯ.
ಪಾದಯಾತ್ರೆಯ ನಡುವೆಯೇ ಮಾದೇಗೌಡ ಮತ್ತು ಕೃಷ್ಣ ನಡುವೆ ಮಾತುಕತೆ ನಡೆಯುವ ಅವಕಾಶವನ್ನು ಸಂಸದ ಅಂಬರೀಶ್ ಕಲ್ಪಿಸಿಕೊಟ್ಟರು. ಈ ಮಾತುಕತೆಯಲ್ಲಿ ಮಾದೇಗೌಡರು ‘ವೃಥಾ ರಾಜಕೀಯಕ್ಕೆ ತಿರುಗುವುದು ಬೇಡ ’ ಎಂದು ಕೃಷ್ಣ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಮಾತುಕತೆ ನಂತರ ಸುದ್ದಿಗಾರರೊಡನೆ ಮಾತಾಡಿದ ಮಾದೇಗೌಡ, ‘ಮುಖ್ಯಮಂತ್ರಿಗಳ ತೀರ್ಮಾನವನ್ನು ಈಗಾಗಲೇ ರೈತರು ಮತ್ತು ಜನ ಮೆಚ್ಚಿಕೊಂಡಿದ್ದಾರೆ. ಕಾವೇರಿ ನೀರನ್ನು ಉಳಿಸಿಕೊಳ್ಳಲು ಜೈಲಿಗೆ ಹೋಗಲೂ ಸಿದ್ಧ ಅಂತ ಮುಖ್ಯಮಂತ್ರಿ ಹೇಳಿರುವುದೇ ದೊಡ್ಡ ಭರವಸೆ. ಇದಕ್ಕಾಗಿ ಸರ್ಕಾರ ಉರುಳಿದರೂ ಚಿಂತೆಯಿಲ್ಲ ಎಂದು ಅವರು ಹೇಳಿರುವುದೇ ಸಾಕು. ಪಾದಯಾತ್ರೆ ಜನರನ್ನು ಒಡೆಯುವುದಾದರೆ ಅದಕ್ಕೆ ಅರ್ಥವಿಲ್ಲ. ಪಾದಯಾತ್ರೆ ನಿಲ್ಲಿಸಿದರೆ, ಇಲ್ಲಿನ ರೈತ ಸಂಘಗಳು ನಡೆಸುತ್ತಿರುವ ಚಳವಳಿಯನ್ನು ವಾಪಸ್ಸು ಪಡೆಯುವುದಾಗಿ ಭರವಸೆ ಕೊಟ್ಟಿದ್ದೇವೆ’ ಎಂದು ತಿಳಿಸಿದರು.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ












Click it and Unblock the Notifications