ಇಂಡಿ ಬಳಿ ಹಿಂಸೆಗೆ ತಿರುಗಿದ ಪ್ರತಿಭಟನೆ,ಗೋಲಿಬಾರ್‌ಗೆ ನಾಲ್ವರ ಬಲಿ
ಬೆಂಗಳೂರು: ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಒಬ್ಬರ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ಝಳಕಿ ಗ್ರಾಮಸ್ಥರ ಗುಂಪನ್ನು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದಾಗ ನಾಲ್ವರು ಮೃತಪಟ್ಟಿದ್ದಾರೆ.
ಝಳಕಿಯ ದೋಂಡಿಬಾಕರ್(30), ಅಸನ್ ಲಾಡ್ಲೆ ಬಾ ಮುಲ್ಲಾ (26), ಕಲ್ಲಪ್ಪ ರಾಮನಗೌಡ ಬಿರಾದಾರ್ (32), ಸ್ಥಳದಲ್ಲೇ ಮೃತಪಟ್ಟರು. ಅಂಜುಟುಗಿ ಗ್ರಾಮದ ರಾಘವೇಂದ್ರ ಗುರಪ್ಪ ನಾವಿ ಎಂಬವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ದುರ್ಘಟನೆಯಲ್ಲಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಝಳಕಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಮವಸ್ತ್ರದಲ್ಲಿದ್ದ ಪಿಎಸ್‌ಐ, ಜಿ. ಬಿ. ಕವಟೇಕರ್ ಅವರ ಶವ ಪೊಲೀಸ್ ಠಾಣೆ ಆವರಣದ ಬೇವಿನ ಮರಕ್ಕೆ ನೇತು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದನ್ನು ಆತ್ಮ ಹತ್ಯೆ ಪ್ರಕರಣ ಎಂದು ಪರಿಗಣಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟಿಸುತ್ತಿದ್ದರು. ಅವರ ಸಾವಿಗೆ ಸಿಪಿಐ ಎನ್. ಎಂ. ಈಟೇರ ಅವರೇ ಕಾರಣ ಎಂಬುದು ಗ್ರಾಮಸ್ಥರ ಆರೋಪ. ಪ್ರತಿಭಟನೆ ಹಿಂಸೆಗೆ ತಿರುಗಿದಾಗ ಪೊಲೀಸರು ಗುಂಪನ್ನು ನಿಯಂತ್ರಿಸಲು ಗೋಲಿಬಾರ್ ನಡೆಸಬೇಕಾಯಿತು.
ಗೋಲಿಬಾರ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದ್ದು, ಮೃತಪಟ್ಟವರ ಕುಟುಂಬದವರಿಗೆ ಸರಕಾರ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಚಣಚಣ ವೃತ್ತದ ಪೊಲೀಸ್ ಇನ್‌ಸ್ಪೆಕ್ಟರ್ ಎನ್. ಎಂ. ಈಟೇರ ಅವರನ್ನು ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಮತ್ತು ಆರ್ಥಿಕ ನೆರವು ನೀಡುವುದಾಗಿ ಪ್ರಕಟಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications