ಜಾಗತೀಕರಣ-ಕೋಮುವಾದದ ವಿರುದ್ಧ ಬರಗೂರು ಪ್ರಹಾರ
ಬೆಂಗಳೂರು: ಜಾಗತೀಕರಣದ ಬಿಕ್ಕಟ್ಟು ಮತ್ತು ಕೋಮುವಾದ ಸಮಾಜದ ಮೇಲೆ ಆತಂಕಕಾರಿ ಪರಿಣಾಮಗಳನ್ನುಂಟು ಮಾಡುತ್ತಿವೆ. ಇದನ್ನು ಸಾಂಸ್ಕೃತಿಕ ನೆಲೆಗಟ್ಟಿನಿಂದಲೂ ವಿರೋಧಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಸೆಂಟ್ರಲ್ ಕಾಲೇಜಿನಲ್ಲಿ ಗುರುವಾರ ನಡೆದ ರಾಷ್ಟ್ರೀಯ ವೇದಿಕೆಯ ಜಿಲ್ಲಾ ಸಮಾವೇಶದಲ್ಲಿ ಬರಗೂರು ಮಾತನಾಡುತ್ತಿದ್ದರು. ಕೋಮುವಾದಕ್ಕೆ ತನ್ನದೇ ಆದ ಇತಿಹಾಸವಿದೆ. ಸ್ವಾತಂತ್ರ್ಯಪೂರ್ವದಲ್ಲಿಯೂ ಕೋಮುವಾದ ಇತ್ತು. ನಂತರವೂ ಅದು ಮುಂದುವರೆದಿದೆ. ಅಪಾಯವೆಂದರೆ, ಅದೀಗ ರಾಜಕೀಯ ಸಂಘರ್ಷದ ಪರಿಭಾಷೆ ಪಡೆದುಕೊಂಡಿದೆ ಎಂದು ಬರಗೂರು ಅಭಿಪ್ರಾಯಪಟ್ಟರು.
ಕೋಮುವಾದ ಎನ್ನುವುದು ಈಗ ಜನರ ಮನೋಧರ್ಮವಾಗಿ ಪರಿಣಮಿಸಿದೆ. ಆದ್ದರಿಂದ ಅದನ್ನು ಎಲ್ಲ ನೆಲೆಗಟ್ಟಿನಿಂದಲೂ ವಿರೋಧಿಸಬೇಕಾದ ಅವಶ್ಯಕತೆ ಇದೆ. ಚರಿತ್ರೆ, ಪೌರಾಣಿಕ ವ್ಯಕ್ತಿಗಳನ್ನು ಬಳಸಿಕೊಂಡು ಧಾರ್ಮಿಕ ಮೂಲಭೂತವಾದಿಗಳು ಕೋಮುವಾದವನ್ನು ಹೆಚ್ಚಿಸುತ್ತಿದ್ದಾರೆ ಎಂದು ಟೀಕಿಸಿದ ಬರಗೂರು, ಸಾಂಸ್ಕೃತಿಕವಾಗಿಯೂ ಇವುಗಳನ್ನು ಪ್ರತಿಭಟಿಸುವುದು ಅಗತ್ಯ ಎಂದು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications