ಬೆಂಗಳೂರು ಸೆಂಟ್ರಲ್ ಜೈಲುವಾಸಿಗಳಿಗೆ ಸಂದ ಕಂಪ್ಯೂಟರ್ ಮಿತ್ರನ ಸಹವಾಸ!
ಬೆಂಗಳೂರು : ಇನ್ನು ಕೆಲವೇ ವರ್ಷಗಳಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಿಂದ ಕೈದಿಗಳು ಸಾಫ್ಟ್‌ವೇರ್ ಎಂಜಿನಿಯರುಗಳಾಗಿ ಹೊರಬಂದರೂ ಅಚ್ಚರಿಯಿಲ್ಲ. ಯಾಕೆಂದರೆ, ಜೈಲುವಾಸಿಗಳು ಇನ್ನು ಮುಂದೆ ಕಂಪ್ಯೂಟರ್ ಸಹವಾಸಿಗಳು!
ಇದು ರೋಟರಿ ರಾಜಮಹಲ್ ವಿಲಾಸ್ ಕೊಡುಗೆ. ಏಪ್ರಿಲ್ 27, ಶನಿವಾರ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಂದ ಕೇಂದ್ರ ಕಾರಾಗೃಹದಲ್ಲಿ ಕಂಪ್ಯೂಟರ್ ಯೋಜನೆಗೆ ಚಾಲನೆ. ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ, ಸೀಮನ್ಸ್, ಸ್ಕೂಲ್‌ನೆಟ್ ಇಂಡಿಯಾ, ಮೈಕ್ರೋಕೇರ್, ಮೈಕ್ರೋಸಾಫ್ಟ್, ಮಂಡ್ಯ ಕಂಪ್ಯೂಟರ್ ಕೇಂದ್ರ- ಇವುಗಳ ನೆರಳಿನಲ್ಲಿ ಈ ಮಹತ್ವದ ಯೋಜನೆ ಹಕೀಕತ್ತಾಗಿದೆ.
ಕೇಂದ್ರ ಕಾರಾಗೃಹದಲ್ಲಿರುವ ಪ್ರಸ್ತುತ 2700 ಕೈದಿಗಳ ಪೈಕಿ 300 ಮಂದಿಯನ್ನು ಆರಿಸಿ, 72 ಗಂಟೆಗಳ ಅವಧಿಯ ತರಪೇತಿ ನೀಡಲಾಗುವುದು. ಈ ಅವಧಿಯಲ್ಲಿ ಬೇಸಿಕ್ ಹಾಗೂ ಎಂಎಸ್ ಆಫೀಸ್ ಹೇಳಿಕೊಡಲಾಗುವುದು. ದೀರ್ಘಾವಧಿ ಕಾಲ ಜೈಲಿನಲ್ಲಿರುವವರಿಗೆ ಕಲಿಕೆಗೆ ಮೊದಲ ಆದ್ಯತೆ. ಯಾಕೆಂದರೆ, ಅವರಿಗೆ ಚೆನ್ನಾಗಿ ತರಪೇತಿ ಕೊಟ್ಟರೆ, ಇತರರಿಗೆ ಬೋಧಿಸುವ ಸಾಮರ್ಥ್ಯವನ್ನು ಅವರಲ್ಲಿ ರೂಢಿಸಬಹುದು. ಅಂದರೆ, ಮುಂದಿನ ದಿನಗಳಲ್ಲಿ ಕೈದಿಗಳಲ್ಲೇ ಜಾಣರು ಕಂಪ್ಯೂಟರ್ ಮೇಷ್ಟ್ರುಗಳಾಗುತ್ತಾರೆ ಎನ್ನುತ್ತಾರೆ ಯೋಜನೆಯ ರೂವಾರಿ ಎಂ.ಸಿಅಗರ್ವಾಲ್.
ಯುಪಿಎಸ್ ಸಹಿತ 10 ಕಂಪ್ಯೂಟರ್‌ಗಳು, ಒಂದು ಸರ್ವರ್, ಇಂಟರ್ನೆಟ್ ಸಂಪರ್ಕ, ಸಾಫ್ಟ್‌ವೇರ್, ಆಪರೇಟಿಂಗ್ ಸಿಸ್ಟಂ, ಒಂದು ವರ್ಷದ ತರಪೇತಿ- ಇವಿಷ್ಟನ್ನೂ ರೋಟರಿ ಒದಗಿಸಲಿದೆ. ನಂತರ ಈ ಯೋಜನೆ ಸ್ವಾಯತ್ತ ಸ್ವರೂಪ ಪಡೆದುಕೊಂಡು ಮುಂದುವರೆಯಲಿದೆ. ಒಟ್ಟು 8.1 ಲಕ್ಷ ರುಪಾಯಿಯ ಈ ಯೋಜನೆಗೆ ಐಟಿ ಇಲಾಖೆ 3.6 ಲಕ್ಷ ರುಪಾಯಿ ಒದಗಿಸಿದೆ. ಉಳಿದದ್ದೆಲ್ಲಾ ಸಹಾಯ ಧನ.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications