ಪೊಲೀಸ್ ರಕ್ಷಣೆ ಕೋರಿ ಕೋರ್ಟ್ ಮೊರೆ ಹೊಕ್ಕ ನಕ್ಕೀರನ್ ಗೋಪಾಲ್
ಚೆನ್ನೈ : ಪ್ರಾಣಾಪಾಯದ ಹಿನ್ನೆಲೆಯಲ್ಲಿ ತಮಗೆ ಪೊಲೀಸ್ ರಕ್ಷಣೆ ಒದಗಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ನಕ್ಕೀರನ್ ಪತ್ರಿಕೆಯ ಸಂಪಾದಕ ಹಾಗೂ ರಾಜ್ ಅಪಹರಣ ಪ್ರಕರಣದಲ್ಲಿ ವೀರಪ್ಪನ್ ಜೊತೆ ಸಂಪರ್ಕ ಸಾಧಿಸಿದ್ದ ಆರ್.ಆರ್.ಗೋಪಾಲ್ ಮದ್ರಾಸ್ ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ.
ತಮಗೆ ಮಾತ್ರವಲ್ಲದೆ, ನಕ್ಕೀರನ್ ಪತ್ರಿಕೆಯ ಉಳಿದ ವರದಿಗಾರರಿಗೆ ಹಾಗೂ ಅವರ ಕುಟುಂಬದವರಿಗೆ ತಕ್ಷಣದಿಂದಲೇ ರಕ್ಷಣೆ ಕಲ್ಪಿಸಬೇಕೆಂದು ಗೋಪಾಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಗೋಪಾಲ್ ಅರ್ಜಿಯ ಕುರಿತು ನ್ಯಾಯಮೂರ್ತಿ ಇ.ಪದ್ಮನಾಭನ್ ಅವರು ವಿವರಣೆ ಕೋರಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು , ಉತ್ತರ ನೀಡಲು ಒಂದು ವಾರದ ಗಡುವು ನೀಡಿದ್ದಾರೆ.
ಈ ಮುನ್ನ ತಮಗೆ ಕಲ್ಪಿಸಲಾಗಿದ್ದ ಪೊಲೀಸ್ ರಕ್ಷಣೆಯನ್ನು ಏಕಾಏಕಿ ಯಾವುದೇ ವಿವರಣೆ ನೀಡದೆ ಏಪ್ರಿಲ್ 6 ರಿಂದ ವಾಪಸ್ಸು ಪಡೆಯಲಾಗಿದೆ. ಮತ್ತೆ ಪೊಲೀಸ್ ರಕ್ಷಣೆ ನೀಡುವಂತೆ ಮಾಡಿಕೊಂಡ ಮನವಿಗೆ ಮನ್ನಣೆ ಸಿಕ್ಕಿಲ್ಲ . ಡಿಎಂಕೆ ಹಾಗೂ ಅಣ್ಣಾಡಿಎಂಕೆ ಎರಡೂ ಸರ್ಕಾರಗಳ ಅವಧಿಯಲ್ಲಿ ತಾವು ಚಿತ್ರಹಿಂಸೆ ಅನುಭವಿಸಿರುವುದಾಗಿ ಗೋಪಾಲ್ ಅಲವತ್ತು ಕೊಂಡಿದ್ದಾರೆ.
(ಏಜೆನ್ಸೀಸ್)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications