ಬಣ್ಣದ ಬದುಕಿಗೆ ಆಸರೆ ; ನಾಟಕ ಅಕಾಡೆಮಿ ಪ್ರಶಸ್ತಿ ಮೌಲ್ಯ ದುಪ್ಪಟ್ಟು
ಮಂಗಳೂರು : ಕಲಾವಿದರಿಂದ ಕಲಾಭಿಮಾನಿಗಳು ಸಂತೋಷಗೊಳ್ಳುತ್ತಾರೆ. ನೋಡುಗನ ಹೃದಯವನ್ನು ತಣಿಸುವ ಕಲಾವಿದನ ಹೊಟ್ಟೆ ಮಾತ್ರ ಬರಿದಾಗಿರುತ್ತದೆ. ಈ ವಿಪರ್ಯಾಸವನ್ನು ತಪ್ಪಿಸಲು, ನಾಟಕ ಅಕಾಡೆಮಿಯ ಪ್ರಶಸ್ತಿ ಮೌಲ್ಯವನ್ನು ದುಪ್ಪಟ್ಟು ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಘೋಷಿಸಿದ್ದಾರೆ.
ಅವರು ಮಂಗಳೂರಿನ ಕಲಾಂಗಣ್‌ನಲ್ಲಿ ಗುರುವಾರ ನಡೆದ ರಾಜ್ಯ ನಾಟಕ ಕಲಾ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಪ್ರಶಸ್ತಿ ಗಿಟ್ಟಿಸಿಕೊಂಡ ಕಲಾವಿದನ ಜವಾಬ್ದಾರಿ ಸಹಜವಾಗಿ ಹೆಚ್ಚಾಗುತ್ತದೆ. ಪ್ರಶಸ್ತಿಯಿಂದ ಕಲಾವಿದನ ಗೌರವ ಹೆಚ್ಚಾಗುವ ಬದಲು ಕಲಾವಿದನಿಂದ ಆ ಪ್ರಶಸ್ತಿಗೆ ಹೆಚ್ಚಿನ ಗೌರವ ಸಂದರೆ, ಅದು ಚೆಂದಾಗಿರುತ್ತದೆ ಎಂದು ಸಚಿವೆ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಸಂಸ್ಕೃತಿ ಪೋಷಣೆಯ ಬಗ್ಗೆ ಮಾತನಾಡಿದ ರಾಣಿ ಸತೀಶ್, ಸಂಸ್ಕೃತಿಯನ್ನು ಉಳಿಸುವ ಕಾರ್ಯ ಸರಕಾರ ಮತ್ತು ಸಮುದಾಯದಿಂದ ಆಗಬೇಕು. ಬದುಕಿಗೆ ಸಂಸ್ಕಾರವನ್ನು ನೀಡುವ ಕಲೆಯನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂದು ಪೋಷಕರಿಗೆ ಕರೆ ನೀಡಿದರು.
ನಾಟಕ ಅಕಾಡಮಿಯ ಅಧ್ಯಕ್ಷ ಆರ್. ನಾಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಹಾಗೂ ನಾಟಕ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 25 ಮಂದಿ ಕಲಾವಿದರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications