ಕೃಷ್ಣರ ಮಣ್ಣಿನ ಮಕ್ಕಳಲಿಸ್ಟಲ್ಲಿ ಸುಧಾಮೂರ್ತಿ,ನೀಲೇಕಣಿ,ಗುರುರಾಜ ದೇಶಪಾಂಡೆ...
ಹುಬ್ಬಳ್ಳಿ : ಮಣ್ಣಿನ ಮಕ್ಕಳು ಎನ್ನುವುದನ್ನು ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವವರ ವಿರುದ್ಧ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು - ಸುಧಾಮೂರ್ತಿ, ನಂದನ್ ನೀಲೇಕಣಿ, ಗುರುರಾಜ ದೇಶಪಾಂಡೆ ಸೇರಿದಂತೆ ನಾವೆಲ್ಲರೂ ಮಣ್ಣಿನ ಮಕ್ಕಳೇ ಎಂದು ಹೇಳಿದ್ದಾರೆ.
ಐಟಿಯಿಂದ ಮಣ್ಣಿನ ಮಕ್ಕಳಿಗೆ ಏನೇನೂ ಉಪಯೋಗವಾಗಿಲ್ಲ ಎನ್ನುವ ಅಭಿಪ್ರಾಯಗಳನ್ನು ನಿರಾಕರಿಸಿದ ಮುಖ್ಯಮಂತ್ರಿಗಳು, ನಮ್ಮ ಮಕ್ಕಳಿಗೆ ಒಂದು ತುತ್ತು ಅನ್ನ ನೀಡುವುದಾದರೆ ಐಟಿ / ಬಿಟಿಯನ್ನು ವಿರೋಧಿಸುವುದಾದರೂ ಏಕೆ ಎಂದು ಪ್ರಶ್ನಿಸಿದರು. ಅವರು ಹುಬ್ಬಳ್ಳಿಯಲ್ಲಿ ನಡೆದ ಮಾಹಿತಿ ತಂತ್ರಜ್ಞಾನದ ಅವಕಾಶ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಐಟಿ / ಬಿಟಿ ಅಥವಾ ರಾಜಕಾರಣ ಸೇರಿದಂತೆ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವಿರುವ ಪ್ರತಿಯಾಂದೂ ನಮಗೆ ಅವಶ್ಯಕ ಎಂದ ಮುಖ್ಯಮಂತ್ರಿಗಳು, ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವಿರುವುದನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ರಾಜ್ಯದ ಅಭಿವೃದ್ಧಿಗಳ ಬಗ್ಗೆ ರಾಜಕಾರಣಿಗಳಂತೆ ಐಎಎಸ್ ಅಧಿಕಾರಿಗಳು ಕಾಳಿ ವ್ಯಕ್ತಪಡಿಸುತ್ತಿಲ್ಲ ಎಂದು ವಿಷಾದಿಸಿದ ಅವರು, ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿತನ ತಮಗೆ ಸಂಕಟ ಉಂಟು ಮಾಡುತ್ತದೆ ಎಂದರು.
ಹುಬ್ಬಳ್ಳಿ ಹಾಗೂ ಬೆಂಗಳೂರು ಎರಡೂ ಕಡೆ ಕುಡಿಯುವ ನೀರಿನ ಸಮಸ್ಯೆಯಿದೆ. ಬೆಂಗಳೂರಿನಲ್ಲಿ ಶೇ.97 ಗ್ರಾಹಕರು ಮೀಟರ್ ಹಾಕಿಸಿಕೊಂಡಿದ್ದರೆ- ಹುಬ್ಬಳ್ಳಿಯಲ್ಲಿ ಮೀಟರ್ ಹಾಕಿಸಿಕೊಂಡವರ ಪ್ರಮಾಣ ಶೇ.17 ಮಾತ್ರ. ನೀರು ಬೇಕು, ಮೀಟರ್ ಬೇಡ ಎನ್ನುವುದು ಸರಿಯಾದ ನೀತಿಯಲ್ಲ ಎಂದು ನಾಗರಿಕರಿಗೆ ಕೃಷ್ಣ ಕಿವಿಮಾತು ಹೇಳಿದರು.
ಸಚಿವರಾದ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಎಂ.ಎಂ.ಹಿಂಡಸಗೇರಿ, ಪ್ರೊ.ಬಿ.ಕೆ.ಚಂದ್ರಶೇಖರ್, ವೀರಕುಮಾರ್ ಪಾಟೀಲ್, ವಿರೋಧಿ ಮುಖಂಡರಾದ ಬಿಜೆಪಿಯ ಜಗದೀಶ್ ಶೆಟ್ಟರ್, ಶಾಸಕ ಬಸವರಾಜ ಬೊಮ್ಮಾಯಿ, ಸಂಸದ ಐ.ಜಿ.ಸನದಿ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications