• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಯೋಧ್ಯೆಯಲ್ಲಿ ರಾಮ ಮಂದಿರ : ಅವಿಭಕ್ತ ಕುಟುಂಬದ ತವಕ ತಲ್ಲಣಗಳು

By Staff
|

*ಎಂ. ವಿನೋದಿನಿ

VHP Logoರಾಮಮಂದಿರ ನಿರ್ಮಾಣವೇ ತನ್ನ ಏಕಮೇವಾದ್ವಿತೀಯ ಗುರಿ ಎಂದು ಹೋರಾಡುತ್ತಿರುವ ವಿಶ್ವ ಹಿಂದೂ ಪರಿಷತ್‌ ಹಾಗೂ ದೇಶದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ; ಇಬ್ಬರ ನಡುವಿನ ಕಂದಕವನ್ನು ಸರಿಪಡಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಧ್ಯಸ್ಥಿಕೆ.

ರಾಮ ಮಂದಿರದ ವಿಷಯದಲ್ಲಿ ಇವತ್ತು ವಿಶ್ವ ಹಿಂದೂ ಪರಿಷತ್‌, ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಹಿಸಿರುವ ಪಾತ್ರಗಳು ಅನೇಕ ಕಾರಣಗಳಿಗಾಗಿ ಕುತೂಹಲ ಹುಟ್ಟಿಸುತ್ತವೆ. ಒಂದು ಗುರಿ ಸಾಧನೆಗಾಗಿ ಕುಟುಂಬವೊಂದರ ಎಲ್ಲ ಸದಸ್ಯರೂ ಬದ್ಧರಾಗಿದ್ದರೂ, ವಿವಿಧ ಕಾರಣಗಳಿಗಾಗಿ ಪರಸ್ಪರ ವಿಮುಖರಾಗಬೇಕಾದ ಅನಿವಾರ್ಯತೆ- ಧರ್ಮ ಸಂಕಟ ಈ ಸಂಘಟನೆಗಳದಾಗಿದೆ. ನಡೆಯುತ್ತಿರುವ ಘಟನೆಗಳನ್ನೇ ಗಮನಸಿ :

ಆರ್‌ಎಸ್‌ಎಸ್‌ ಜೊತೆ ಮಾತುಕತೆ ನಡೆಸಿದ ನಂತರ ವಿಹೆಚ್‌ಪಿ ತನ್ನ ಕಠಿಣ ನಿಲುವನ್ನು ಸಡಿಲಿಸಲು ಷರತ್ತಿನ ಮೇರೆಗೆ ಒಪ್ಪಿಕೊಂಡಿದೆ. ಕೆತ್ತನೆಯ ಕಂಬಗಳನ್ನು ಮೂರು ತಿಂಗಳಳೊಗೆ ಅಯೋಧ್ಯಾ ಸರಕಾರದ ಸ್ವಾಧೀನದಲ್ಲಿರುವ ನಿವೇಶನಕ್ಕೆ ಸಾಗಿಸಿ ಪೂಜೆ ಸಲ್ಲಿಸಲು ಅನುವು ಮಾಡಿಕೊಟ್ಟರೆ ಮಂದಿರ ನಿರ್ಮಾಣಕ್ಕೆ ನೀಡಿರುವ ಗಡುವನ್ನು ಸಡಿಲಿಸಲು ವಿಹೆಚ್‌ಪಿ ರೆಡಿ.

ಆದರೆ ಕಂಬ ಸಾಗಾಣಿಕೆಯ ಷರತ್ತು ಸರಳವಾಗಿದೆಯೇ ? ಅದಕ್ಕೆ ಕೇಂದ್ರ ಅನುಮತಿ ನೀಡುವುದು ಸಾಧ್ಯವಾದೀತೆ? ಈ ನಡುವೆ ತಾನು ಮಂದಿರ ನಿರ್ಮಾಣಕ್ಕೆ ನೀಡಿದ ಗಡುವಿಗೆ ಮುಂಚೆ ಕೋರ್ಟ್‌ ತೀರ್ಪು ಬಂದರೆ ಅದಕ್ಕೆ ಬದ್ಧವಾಗಿರುವುದಾಗಿಯೂ ವಿಹೆಚ್‌ಪಿ ಹೇಳಿದೆ. ಬೀಸುವ ದೊಣ್ಣೆ ತಪ್ಪಿಸಿಕೊಂಡರೆ ಸಾಕು ಎಂಬಂತೆ ಮಂದಿರ ನಿರ್ಮಾಣ ಗಡುವನ್ನು ಮುಂದಕ್ಕೆ ಹಾಕಬಹುದು. ಆದರೆ ಸಮಸ್ಯೆ ಬೂದಿ ಮುಚ್ಚಿದ ಕೆಂಡದಂತೆ ಮತ್ತಷ್ಟು ಬೆಳೆಯುತ್ತಲೇ ಇರುತ್ತದೆ.

ಇದು ಮನೆ ಮಕ್ಕಳ ಜಗಳವಿದ್ದ ಹಾಗೆ

Bhagawadhwajಸ್ವತಂತ್ರ ಭಾರತಕ್ಕೆ ಬ್ರಿಟಿಷರು ಹಚ್ಚಿದ ಇಂಡಿಯಾ ಎಂಬ ಹಣೆಪಟ್ಟೆಯನ್ನು ಕಿತ್ತೆಸೆಯುವ ಹಾಗೂ ಅಖಂಡ ಭಾರತವನ್ನು ಕಟ್ಟುವ ಮಹಾನ್‌ ಉದ್ದೇಶದೊಂದಿಗೆ ಆರಂಭವಾದ ಆರ್‌ಎಸ್‌ಎಸ್‌ ಸಂಘಟನೆ ಒಂದು ವಟವೃಕ್ಷ. ತನ್ನ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಆಶ್ರಯದಲ್ಲಿ ಹುಟ್ಟಿಕೊಂಡ ಶಾಖೆಗಳು (ವಿಹೆಚ್‌ಪಿ, ಎಬಿವಿಪಿ, ಬಿಜೆಪಿ, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಇತ್ಯಾದಿ) ಸಮಾಜದ ಒಂದೊಂದು ಕ್ಷೇತ್ರದ ಜವಾಬ್ದಾರಿಯನ್ನು ಸೊಂಟಕ್ಕೆ ಕಟ್ಟಿಕೊಂಡವು. ಹೀಗೆ ಬೆಳೆದ ಪರಿವಾರ ಒಂದು ಶಿಸ್ತು ಬದ್ಧ ಅವಿಭಕ್ತ ಕುಟುಂಬವಾಗಿ ಬೆಳೆದು ಈಗ ದೇವಸ್ಥಾನ ಕಟ್ಟುವ ವಿಷಯಕ್ಕೆ ಕಿತ್ತಾಡುತ್ತಿವೆ.

ಪರಿವಾರದ ಒಂದು ಸಂಘಟನೆಯ ಕಾರ್ಯಕರ್ತ ಇನ್ನೊಂದರಲ್ಲಿ ತೊಡಗಿಸಿಕೊಳ್ಳುವುದು ಕೂಡ ಇಲ್ಲಿನ ಆತ್ಮೀಯ ಕ್ರಮ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರಾಗಿದ್ದ ವಾಜಪೇಯಿ, ಸಂಘ ಕಾರ್ಯಕ್ರಮದಲ್ಲಿ ಚಡ್ಡಿ ಹಾಕಿಕೊಂಡು ಭಗವಾ ಧ್ವಜಕ್ಕೆ ವಂದಿಸಿ, ಮತ್ತೆ ಬಿಜೆಪಿಯ ಕೇಸರಿ- ಹಸಿರು ಧ್ವಜ ಹಿಡಿದು ಚುನಾವಣೆಯಲ್ಲಿ ಮಹಾಜನತೆಯನ್ನು ಸಂಧಿಸಿದರು. ಈಗ ಅವರು ದೇಶದ ಜವಾಬ್ದಾರಿಯುತ ಪ್ರಧಾನಿ. ಪ್ರಧಾನಿ ಪಟ್ಟ , ಬಿಜೆಪಿ ಪಕ್ಷ, ಕೊನೆಗೆ ತಾನು ನಡೆದು ಬಂದ ದಾರಿ... ಈ ಗೊಂದಲಪುರಿಯಲ್ಲಿ ಎಲ್ಲವನ್ನೂ ನಿಭಾಯಿಸಲು ಹೆಣಗುತ್ತಿದ್ದಾರೆ.

ಇದು ಪ್ರಧಾನಿಯ ಸಂಜೆ ಕಾಲದ ಸಂಕಟವಾದರೆ ಆಧ್ಯಾತ್ಮ ಬೆಳಕಿನ ಅಖಂಡ ಭಾರತದ ಕನಸು ಹೊತ್ತ ಆರ್‌ಎಸ್‌ಎಸ್‌ನದು ಇನ್ನೊಂದು ಬೇನೆ. ಯಾವುದೇ ಬೆಲೆ ತೆತ್ತಾದರೂ ಮಂದಿರ ನಿರ್ಮಾಣ ಆಗಲೇಬೇಕು. ಆದರೆ ವಿಹೆಚ್‌ಪಿಯವರು ಹೀಗೆಲ್ಲಾ ಗಡುವು ನೀಡಿ, ಇನ್ನೇನು ದೇಶ ಹೊತ್ತಿ ಉರಿಯುತ್ತದೆ ಎನ್ನುವಷ್ಟು ಕಾವೇರಿಸಿದ್ದಾರೆ. ಅವರೂ ನಮ್ಮವರೇ, ಪ್ರಧಾನಿಯವರೂ ನಮ್ಮವರೇ, ಬಿಜೆಪಿಯೂ ಪ್ರೀತಿಯದ್ದೇ... ನೆಂಟರ ಮೇಲೆ ಪ್ರೀತಿ ಅಕ್ಕಿ ಮೇಲೆ ಆಸೆ ಎಂಬ ಹಾಗೆ ಇರುವ ಈ ಉಭಯ ಸಂಕಟವನ್ನು ಎದುರಿಸುವ ಸವಾಲು ಆರ್‌ಎಸ್‌ಎಸ್‌ನದು. ಬಿಜೆಪಿಯ ಬೇಗುದಿಯೂ ಇದುವೇ.

ಬಳಗದ ಪ್ರೀತ್ಯರ್ಥ ಆಧುನಿಕವಾದ ಬಿಜೆಪಿ

ಹಲವು ವರ್ಷಗಳಿಂದ ರಾಮಮಂದಿರ ನಿರ್ಮಾಣದ ಅಜೆಂಡಾ ಬಿಜೆಪಿಯ ಕಾರ್ಯ ಸೂಚಿಯಲ್ಲಿದ್ದರೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸ್ವಲ್ಪ ಆಧುನೀಕರಣ ತಂದಿತ್ತು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವೆಂಬ ಗೆಳೆಯರ ಬಳಗದೊಂದಿಗೆ ವಾಜಪೇಯಿ ಪಟ್ಟವೇರಿದಾಗ, ಗದ್ದುಗೆಯ ಕಾಲುಗಳು ಮುರಿಯದ ಹಾಗೆ ನೋಡಿಕೊಳ್ಳುವುದೂ ವಾಜಪೇಯಿ ಹೊಣೆಯಾಗಿತ್ತು. ಆಗ ಬಳಗದ ಪ್ರೀತ್ಯರ್ಥವೇನೋ ಎಂಬ ಹಾಗೆ ನಿಧಾನವಾಗಿ ರಾಮ ಮಂದಿರ ನಿರ್ಮಾಣದ ಅಜೆಂಡಾ ಮರೆಯಾಯಿತು.

ಹಾಗೆ ನೋಡಿದರೆ, ಮಂದಿರ ನಿರ್ಮಾಣಕ್ಕೆ ಯಾವುದೂ ಅಡ್ಡಿಯಾಗಬೇಕಿರಲಿಲ್ಲ : ಪರಿವಾರದಿಂದ ಒಂದಲ್ಲ ಒಂದು ರೀತಿಯಲ್ಲಿ ನೆರವು ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರಕಾರವಿದೆ. ಮಂದಿರ ನಿರ್ಮಾಣಕ್ಕೆ ಕೋಟ್ಯಂತರ ರಾಮ ಭಕ್ತರು ಜೀವನವನ್ನೇ ತ್ಯಾಗ ಮಾಡಿ ಅಯೋಧ್ಯೆಯೆಡೆಗೆ ಧಾವಿಸಲು ರೆಡಿಯಾಗಿದ್ದಾರೆ. ಮಂದಿರ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಪರಿವಾರ ವಿವಿಧ ಕ್ಷೇತ್ರದಲ್ಲಿ ಬೆಳೆಸಿದ ಶಾಖೆಗಳಿವೆ. ಅದಾಗ್ಯೂ ಸುಲಲಿತವಾಗಿ ಮಂದಿರ ನಿರ್ಮಾಣ ಸಾಧ್ಯವಾಗುತ್ತಿಲ್ಲ .

ಮುಂದೇನಾಗುತ್ತೆ ?
ಈ ಪ್ರಶ್ನೆಗೆ ಉತ್ತರ ಯಾರಿಗೂ ಗೊತ್ತಿಲ್ಲ . ವಿಹೆಚ್‌ಪಿ ವೀರಾವೇಶದ ಮಾತುಗಳನ್ನು ಮುಂದುವರಿಸುತ್ತಲೇ ಇದೆ. ಬಿಜೆಪಿ ದಂಡ ಹಿಡಿದು ಎಚ್ಚರಿಸುತ್ತಿದೆ. ಅಣ್ಣನ ಪಾತ್ರದಲ್ಲಿರುವ ಆರ್‌ಎಸ್‌ಎಸ್‌ ಶಾಂತಿ ಮಂತ್ರ ಜಪಿಸುತ್ತಿದೆ. ಈ ನಡುವೆ ಸ್ವಲ್ಪ ತಾಳ ತಪ್ಪಿದರೂ- ದೇಶಕ್ಕೆ ದೇಶವೇ ಗುಜರಾತ್‌ ಆಗುವುದು ಖಂಡಿತ. ಅಂಥ ಸ್ಥಿತಿ ದೇಶಕ್ಕೆ ಬರದಂತೆ ರಾಮ ಅನುಗ್ರಹಿಸಲಿ!

Post Your thoughts and Comments

ಮುಖಪುಟ / ಲೋಕೋಭಿನ್ನರುಚಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more