ಹೆಗಡೆ-ಮಲ್ಯ ಮಾತುಕತೆ : ರಾಜಕೀಯ ವಲಯದಲ್ಲಿ ಕುತೂಹಲದ ಹೂಟೆ
ಬೆಂಗಳೂರು: ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿ ಹೇಳುತ್ತಿರುವ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ರಾಜಕಾರಣದಿಂದ ಕೈ ಸುಟ್ಟುಕೊಂಡಿರುವ ಮದ್ಯೋದ್ಯಮಿ ವಿಜಯ ಮಲ್ಯ ಅವರು ಶನಿವಾರ ಭೇಟಿ ಮಾಡಿದ್ದು ರಾಜಕೀಯ ವಲಯಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಏಪ್ರಿಲ್ ತಿಂಗಳಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಹೆಗಡೆ- ಮಲ್ಯ ಭೇಟಿಗೆ ಮಹತ್ವ ಬಂದಿದೆ. ರಾಜ್ಯದ ರಾಜ್ಯಸಭಾ ಸದಸ್ಯರಾದ ರಾಮಕೃಷ್ಣ ಹೆಗಡೆ, ಕೆ.ಸಿ.ಕೊಂಡಯ್ಯ, ಪ್ರೊ.ಎ.ಲಕ್ಷ್ಮಿಸಾಗರ್ ಹಾಗೂ ಸಿ.ಎಂ. ಇಬ್ರಾಹಿಂ ಅವರ ಅಧಿಕಾರಾವಧಿ ಏಪ್ರಿಲ್ 9 ಕ್ಕೆ ಕೊನೆಗೊಳ್ಳಲಿದ್ದು, ಏ.27 ರಂದು ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕೃಷ್ಣ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊಸತರಲ್ಲಿ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಸ್ಪರ್ಧಿಸಿದ್ದ ಮಲ್ಯ ಅವರು ಸೋಲನುಭವಿಸಿದ್ದರು. ಪ್ರಸ್ತುತ ಚುನಾವಣೆಯಲ್ಲಿ ಹೆಗಡೆ ಅವರು ಸ್ಪರ್ಧಿಸಲು ನಿರಾಕರಿಸಿರುವುದರಿಂದ- ಮಲ್ಯ ಅವರು ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆಂದು ನಂಬಲಾಗಿದೆ.
ಪ್ರಸ್ತುತ ವಿಧಾನಸಭೆಯಲ್ಲಿನ ಬಲಾಬಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳಲ್ಲಿ ಮೂರನ್ನು ಸುಲಭವಾಗಿ ಗೆಲ್ಲಬಲ್ಲದು. ಉಳಿದೊಂದು ಸ್ಥಾನವನ್ನು ಗೆಲ್ಲಲು ಅಗತ್ಯವಾದ ಸಂಖ್ಯಾಬಲ ಯಾರಿಗೂ ಇಲ್ಲವಾದ್ದರಿಂದ, ವಿಜಯ ಮಲ್ಯ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಲ್ಲ ಪಕ್ಷಗಳ ಬೆಂಬಲ ಸಂಗ್ರಹಿಸುವ ಕಸರತ್ತು ನಡೆಸುವ ಸಾಧ್ಯತೆಯಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...