ಬಂದ್ : ಕೆಲವೆಡೆ ಕಲ್ಲು ತೂರಾಟ, ಬೆಂಗಳೂರಿನಲ್ಲಿ ಪರಿಸ್ಥಿತಿ ಶಾಂತ
ಬೆಂಗಳೂರು : ವಿಶ್ವ ಹಿಂದೂ ಪರಿಷತ್ ಕರೆ ನೀಡಿರುವ ಭಾರತ್ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಯಚೂರು, ಬೆಳಗಾವಿ, ತುಮಕೂರು, ಕೋಲಾರ, ಚಿಕ್ಕಮಗಳೂರು ಮುಂತಾದೆಡೆ ಭಜರಂಗ ದಳದ ಕಾರ್ಯಕರ್ತರು ರ್ಯಾಲಿ ನಡೆಸಿದರು. ಕೆಲವೆಡೆ ಸಣ್ಣಪುಟ್ಟ ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ಚಿಕ್ಕಮಗಳೂರಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ಉದ್ರಿಕ್ತ ಚಳವಳಿಕಾರರು ಬಲವಂತವಾಗಿ ಮುಚ್ಚಿಸಿದರು.
ಕಾನೂನು ಮತ್ತು ಸುವ್ಯವಸ್ಥೆಯ ಬಗೆಗೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಶುಕ್ರವಾರ ಬೆಳಗ್ಗೆ ಉನ್ನತ ಮಟ್ಟದ ಸಭೆಯಾಂದಿಗೆ ಚರ್ಚೆ ನಡೆಸಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು , ಈ ಕುರಿತು ಕೃಷ್ಣ ಪರಾಮರ್ಶೆ ನಡೆಸಿದರು.
ಬೆಂಗಳೂರಿನಲ್ಲಿ ಯಥಾ ಸ್ಥಿತಿ : ರಾಜಧಾನಿ ಬೆಂಗಳೂರಿನಲ್ಲಿ ಬಂದ್‌ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ . ವಾಹನ ಸಂಚಾರ ಎಂದಿನಂತಿದ್ದು, ಸರ್ಕಾರಿ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಬೆಳಗ್ಗೆ ಸ್ವಲ್ಪ ಹೊತ್ತು, ಶಾಲಾ ಕಾಲೇಜು- ಕಚೇರಿಗಳಿಗೆ ರಜೆಯಿದೆ ಎನ್ನುವ ಸುದ್ದಿ ಗೊಂದಲಗಳಿಂದ ಗಲಿಬಿಲಿಗೊಂಡಿದ್ದ ಸಾರ್ವಜನಿಕರು, ಈ ಕುರಿತ ಯಾವುದೇ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಧಿಲಿಲ್ಲವಾದ್ದರಿಂದ ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿದರು.
ವಿಹೆಚ್‌ಪಿ ರಾಜ್ಯಘಟಕದ ಹೇಳಿಕೆ : ವಿಹೆಚ್‌ಪಿ ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದಲ್ಲಿ ಶಾಂತಿಯುತ ಬಂದ್ ಆಚರಿಸಲಾಗುವುದು. ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ವಿಹೆಚ್‌ಪಿ ರಾಜ್ಯ ಘಟಕ ತಿಳಿಸಿದೆ.
ಕರಸೇವಕರ ತಡೆಗೆ ಕೇಂದ್ರದ ಸೂಚನೆ : ಆಯೋಧ್ಯೆಗೆ ತೆರಳುವ ಕರಸೇವಕರನ್ನು ಹೊರಡುವ ಸ್ಥಳದಲ್ಲೇ ತಡೆಯುವಂತೆ ಅಥವಾ ಬಂಧಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದು, ಈ ಕುರಿತು ಕೇಂದ್ರ ಗೃಹ ಸಚಿವಾಲಯ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ರೈಲ್ವೆ ರಕ್ಷಣಾ ದಳ ಸಿಬ್ಬಂದಿ ರಾಜ್ಯದ ಎಲ್ಲ ನಿಲ್ದಾಣಗಳಲ್ಲಿಯೂ ಕಟ್ಟೆಚ್ಚರ ವಹಿಸಿದ್ದು, ಅನುಮಾನಾಸ್ಪದ ಪ್ರಯಾಣಿಕರನ್ನು ಗಮನಿಸುವುದು. ಕರ ಸೇವಕರೆಂದು ತಿಳಿದು ಬಂದಲ್ಲಿ ಬಂಧಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications