• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂದ್‌: ರಾಜ್ಯದಲ್ಲಿ ಮಿಶ್ರಪ್ರತಿಕ್ರಿಯೆ, ಕೋಲಾರದಲ್ಲಿ ಕಲ್ಲುತೂರಾಟ

By Staff
|

ಬೆಂಗಳೂರು : ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್‌ ರೈಲು ತಡೆದು ರಾಮ ಸೇವಕರನ್ನು ಹತ್ಯೆಗೈದ ಪ್ರಕರಣವನ್ನು ಖಂಡಿಸಿ ವಿಶ್ವಹಿಂದೂ ಪರಿಷತ್‌ ನೀಡಿದ್ದ ಭಾರತ ಬಂದ್‌ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಶಾಲೆ - ಕಾಲೇಜುಗಳು ಮುಚ್ಚಿದ್ದವು. ಬಸ್‌ ಸಂಚಾರ ವಿರಳವಾಗಿತ್ತು.

ಕೋಲಾರ ಜಿಲ್ಲೆಯಲ್ಲಿ ಕಲ್ಲುತೂರಾಟ, ಅಗ್ನಿಸ್ಪರ್ಶ, ಲೂಟಿ ಪ್ರಕರಣಗಳು ನಡೆದಿವೆ. ಕೋಲಾರದಲ್ಲಿ ನಡೆದ ಸಣ್ಣ ಅಹಿತಕರ ಘಟನೆ ಹೊರತುಪಡಿಸಿ, ರಾಜ್ಯದಲ್ಲಿ ಬಂದ್‌ ಬಹುತೇಕ ಶಾಂತಿಯುತವಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ವಿ.ವಿ. ಭಾಸ್ಕರ್‌ ತಿಳಿಸಿದ್ದಾರೆ. ಈ ಮಧ್ಯೆ ಹುಬ್ಬಳ್ಳಿ ನಗರದಲ್ಲಿ ಒಬ್ಬರು ಇರಿತದಿಂದ ಗಾಯಗೊಂಡಿರುವುದಾಗಿ ಅನಧಿಕೃತ ಮೂಲಗಳು ತಿಳಿಸಿವೆ.

ಚಿಕ್ಕಮಗಳೂರು, ಕಾರವಾರ, ಮಂಗಳೂರು, ಉಡುಪಿ, ಮಡಿಕೇರಿ, ಧಾರವಾಡ, ಶಿವಮೊಗ್ಗಗಳಲ್ಲಿ ಬಂದ್‌ ಶೇ.70ರಷ್ಟು ಯಶಸ್ವಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಎರಡೂ ಕೋಮಿನ ನಾಯಕರ ಜೊತೆ ಪೊಲೀಸರು ಮಾತುಕತೆ ನಡೆಸಿ, ಪರಿಸ್ಥಿತಿ ಶಾಂತವಾಗಿರುವಂತೆ ನೋಡಿಕೊಂಡಿದ್ದಾರೆ.

ಕಟ್ಟೆಚ್ಚರ : ರಾಜ್ಯದಲ್ಲಿ ಶಾಂತಿ ಕಾಪಾಡಲು ಸಕಲ ಬಿಗಿ ಬಂದೋಬಸ್ತ್‌ ಮಾಡಲಾಗಿದೆ, ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಎಲ್ಲಕಡೆ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಕರಸೇವಕರ ಮಾಹಿತಿಯನ್ನು ಉತ್ತರ ಪ್ರದೇಶದ ಪೊಲೀಸರಿಗೆ ನೀಡಲಾಗಿದ್ದು, ಅವರನ್ನೂ ಪತ್ತೆ ಹಚ್ಚಲಾಗುವುದು ಎಂದರು.

ರಾಜ್ಯದಿಂದ ತೆರಳಿರುವ ಕರಸೇವಕರಿಗೆ ಯಾವುದೇ ಅನಾಹುತ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದೂ ಖರ್ಗೆ ಹೇಳಿದರು. ಯಾವುದೇ ಪ್ರಚೋದನೆಗೆ ಒಳಗಾಗದಂತೆ ಅವರು ರಾಜ್ಯ ನಾಗರಿಕರಲ್ಲಿ ಮನವಿ ಮಾಡಿದರು.

ಈ ಮಧ್ಯೆ ಶುಕ್ರವಾರ ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ರಾಜ್ಯಾದ್ಯಂತ ಬಿಗಿ ಭದ್ರತೆ ಒದಗಿಸುವಂತೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹಾಜರಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಮುಸಲ್ಮಾನರಿಗೆ ಪ್ರಾರ್ಥನಾ ದಿನವಾದ ಹಿನ್ನೆಲೆಯಲ್ಲಿ ಪ್ರಾರ್ಥನಾ ಮಂದಿರಗಳ ಬಳಿ ವಿಶೇಷ ಪೊಲೀಸ್‌ ಪಹರೆ ಹಾಕಲಾಗಿತ್ತು. ಮಂಗಳೂರು, ಉಡುಪಿ, ಕೋಲಾರ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆಗಳಲ್ಲಿ ಚಿಕ್ಕಪುಟ್ಟ ಅಹಿತಕರ ಘಟನೆ ನಡೆದ ಬಗ್ಗೆ ವರದಿ ಆಗಿದೆ ಎಂದೂ ಅವರು ಹೇಳಿದರು.

ಬೆಂಗಳೂರು : ಬೆಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್‌ ನೀಡಿದ್ದ ಭಾರತ ಬಂದ್‌ ಕರೆಗೆ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಶಾಲೆ ಕಾಲೇಜುಗಳು, ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸಂಚಾರ ಎಂದಿನಂತಿತ್ತು. ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ, ಕಮ್ಮನಹಳ್ಳಿ, ಜಾಲಹಳ್ಳಿ ಮೊದಲಾದ ಕಡೆ ಕೆಲ ಕಾಲ ರಸ್ತೆ ತಡೆ ನಡೆದ ಬಗ್ಗೆ ವರದಿಯಾಗಿದೆ.

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಬಂದ್‌ ಯಶಸ್ವಿಯಾಗಿದ್ದು, ಹುಬ್ಬಳ್ಳಿಯಲ್ಲಿ ಒಬ್ಬರಿಗೆ ಇರಿದ ಘಟನೆ ನಡೆದಿದೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ. ಈ ಸುದ್ದಿಯ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಕಟ್ಟೆಚ್ಚರಿಕೆ ವಹಿಸಲಾಗಿದೆ ಎಂದೂ ತಿಳಿದು ಬಂದಿದೆ.

ಗೌರಿಬಿದನೂರು : ಗೌರಿಬಿದನೂರಿನಲ್ಲಿ ರಾಮಸೇವಕರ ಹತ್ಯೆ ಪ್ರತಿಭಟಿಸಿ ಬೆಳಗ್ಗೆ 6 ಗಂಟೆ ಬೃಹತ್‌ ಮೆರವಣಿಗೆಯಾಂದಿಗೆ ಆರಂಭವಾದ ಬಂದ್‌ ಸಂಪೂರ್ಣ ಯಶಸ್ವಿಯಾಯಿತು. ನಗರದಲ್ಲಿ ಶಾಲೆ, ಕಾಲೇಜು, ಅಂಗಡಿ, ಮುಂಗಟ್ಟು ಮುಚ್ಚಿದ್ದವು. ಪೊಲೀಸ್‌ ಬಂದೋಬಸ್ತ್‌ ಬಿಗಿಯಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದ ವರದಿ ಬಂದಿಲ್ಲ.

ಬೆಳಗಾವಿ : ಬೆಳಗಾವಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144ರ ಸೆಕ್ಷನ್‌ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದರೂ, ಕೆಲವೆಡೆ ರಸ್ತೆ ತಡೆ ನಡೆಸಿದ, ರಸ್ತೆಯಲ್ಲಿ ಟೈರ್‌ ಸುಟ್ಟ ವರದಿಗಳು ಬಂದಿವೆ. ಇಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳೂ ಮುಚ್ಚಿದ್ದವು.

ಮೈಸೂರು : ಮೈಸೂರಿನಲ್ಲಿ ಸಂಪೂರ್ಣ ಯಶಸ್ವಿ, ಖಾಸಗಿ ಹಾಗೂ ಸರಕಾರಿ ಬಸ್‌ ಸಂಚಾರ ಇಲ್ಲದೆ, ನಾಗರಿಕರು ಪೇಚಿಗೆ ಸಿಲುಕಿದರು. ವಿಎಚ್‌ಪಿ ಕಾರ್ಯಕರ್ತರು ಹತ್ಯೆ ಪ್ರತಿಭಟಿಸಿ ಮೆರವಣಿಗೆ ನಡೆಸಿದರು. ಶಾಸಕ ಎಚ್‌.ಕೆ. ಶಂಕರಲಿಂಗೇಗೌಡ ಮೆರವಣಿಗೆ ನೇತೃತ್ವ ವಹಿಸಿದ್ದರು.

ಆನೇಕಲ್‌ : ಬೆಂಗಳೂರಿನಲ್ಲಿ ಬಂದ್‌ ಕರೆಗೆ ಯಾವುದೇ ಪ್ರತಿಕ್ರಿಯೆ ದೊರೆಯದಿದ್ದರೂ, ಬೆಂಗಳೂರಿಗೆ ಸನಿಹದಲ್ಲೇ ಇರುವ ಆನೇಕಲ್‌ನಲ್ಲಿ ಭಾಗಶಃ ಬಂದ್‌ ಆಚರಿಸಲಾಗಿದೆ. ಸಣ್ಣಪುಟ್ಟ ಪ್ರಕರಣಗಳನ್ನು ಹೊರತು ಪಡಿಸಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆನೇಕಲ್‌ನಲ್ಲಿ ಪ್ರತಿಭಟನಾ ಮೆರವಣಿಗೆ ಕಾಲದಲ್ಲಿ ಚರ್ಚ್‌ ಒಂದರ ಮೇಲೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ಪ್ರಕೋಪಕ್ಕೆ ಹೋಗಿದ್ದು, ಇಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 14 ಜನರನ್ನು ಬಂಧಿಸಲಾಗಿದೆ. ಚಂದಾಪುರದಲ್ಲಿ ಕೂಡ ಬಂದ್‌ ಭಾಗಶಃ ಯಶಸ್ವಿಯಾಗಿದೆ.

ಕೋಲಾರ : ಜಿಲ್ಲೆಯಲ್ಲಿ ಅದರಲ್ಲೂ ಕೋಲಾರ ಪಟ್ಟಣದಲ್ಲಿ ಕಲ್ಲು ತೂರಾಟ, ಅಗ್ನಿಸ್ಪರ್ಶ, ಲೂಟಿ ಇತ್ಯಾದಿ ಹಿಂಸಾಚಾರವೂ ನಡೆದ ವರದಿಗಳು ಬಂದಿವೆ. ಈ ಘಟನೆಗಳಲ್ಲಿ ಭಾರಿ ಪ್ರಮಾಣದ ನಷ್ಟ ಸಂಭವಿಸಿರುವುದಾಗಿ ವರದಿ ತಿಳಿಸಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆ ತುಕಡಿಗಳನ್ನು ಇಲ್ಲಿ ನಿಯೋಜಿಸಲಾಗಿದೆ. ಈ ಹೊತ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಕೋಲಾರ ಜಿಲ್ಲೆಯಲ್ಲಿ ಗುಡಿಬಂಡೆಯಾಂದನ್ನು ಹೊರತು ಪಡಿಸಿ ಮಿಕ್ಕೆಲ್ಲ ಕಡೆಯೂ ಬಂದ್‌ ಯಶಸ್ವಿಯಾಗಿದೆ ಎಂದು ವರದಿಗಳು ತಿಳಿಸಿವೆ. ಕೆಲವು ಅಂಗಡಿ ಮುಂಗಟ್ಟುಗಳನ್ನು ಇಲ್ಲಿ ಭಜರಂಗದಳ ಹಾಗೂ ವಿಎಚ್‌ಪಿ ಕಾರ್ಯಕರ್ತರು ಬಲವಂತವಾಗಿ ಬಾಗಿಲು ಹಾಕಿಸಿದರೆ, ಮತ್ತೆ ಕೆಲವರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಶಿಡ್ಲಘಟ್ಟ, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶ್ರೀನಿವಾಸಪುರ, ಮುಳಬಾಗಲುಗಳಲ್ಲಿ ಬಿಜೆಪಿ ಮುಖಂಡರು ಹಾಗೂ ವಿಎಚ್‌ಪಿಯ ಸಾವಿರಾರು ನಾಯಕರು - ಕಾರ್ಯಕರ್ತರು ಮೆರವಣಿಗೆಗಳನ್ನು ನಡೆಸಿ, ಗೋಧ್ರಾ ನರಮೇಧವನ್ನು ಖಂಡಿಸಿದರು.

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಕೂಡ ಬಂದ್‌ ಬಹುತೇಕ ಯಶ್ವಿಯಾದ ವರದಿಗಳು ಬಂದಿವೆ. ತುರುವೇಕೆರೆ, ತಿಪಟೂರು, ನೊಣವಿನಕೆರೆ, ಪಾವಗಢ, ಮಧುಗಿರಿ, ತುಮಕೂರು, ಗುಬ್ಬಿ ಮೊದಲಾದ ಕಡೆಗಳಲ್ಲಿ ಶಾಂತಿಯುತವಾಗಿ ಬಂದ್‌ ಆಚರಿಸಲಾಗಿದೆ. ಕೆಲವು ತಾಲೂಕು ಕೇಂದ್ರಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರ ಸಹ ಅರ್ಪಿಸಲಾಯಿತು. ತುಮಕೂರಿನಲ್ಲಿ ಶಾಸಕ ಶಿವಣ್ಣ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

ಕುಣಿಗಲ್‌ನಲ್ಲಿ ಬಿ.ಕೆ. ವೆಂಕಟಕೃಷ್ಣರಾವ್‌ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಬಸ್‌ ಸಂಚಾರ ಇಲ್ಲಿ ಎಂದಿನಂತಿತ್ತು. ಆದಾಗ್ಯೂ ಬಂದ್‌ ಇಲ್ಲಿ ಭಾಗಶಃ ಯಶಸ್ವಿಯಾಗಿದ್ದು, ಶಾಂತವಾಗಿತ್ತು.

ಹಾಸನ : ಹಾಸನ ಜಿಲ್ಲೆಯಲ್ಲಿ ವಿಎಚ್‌ಪಿ ನೀಡಿದ್ದ ಬಂದ್‌ ಕರೆಗೆ ಶೇ.60ರಷ್ಟು ಬೆಂಬಲ ವ್ಯಕ್ತವಾಗಿದೆ. ಆಲೂರು, ಸಕಲೇಶಪುರ, ಹೊಳೆನರಸೀಪುರ, ದುದ್ದ, ಬೇಲೂರು, ಹಳೇಬೀಡು, ಸಕಲೇಶಪುರ, ಬಾಗೇಶಪುರ ಮೊದಲಾದ ಕಡೆ ಬಂದ್‌ ಯಶಸ್ವಿಯಾಗಿದ್ದು, ಶಾಂತಿಯುತವಾಗಿತ್ತು. ಕೆಲವೆಡೆ ರಸ್ತೆ ತಡೆ ನಡೆದ ಹಿನ್ನೆಲೆಯಲ್ಲಿ ಸಂಚಾರ ವಿರಳವಾಗಿತ್ತು. ಖಾಸಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಅರಸೀಕೆರೆ : ಅರಸೀಕೆರೆಯಲ್ಲಿ ಭಜರಂಗದಳ, ವಿಎಚ್‌ಪಿ ಕಾರ್ಯಕರ್ತರು ನಡೆಸುತ್ತಿದ್ದ ಮೆರವಣಿಗೆ ಕಾಲದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿದರೆಂದು ವರದಿ ಆಗಿದೆ. ಇಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಈ ಘಟನೆಗಳಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರಿಗೆ ಇರಿತದಿಂದ ಗಾಯಗಳಾಗಿವೆ. ಪೆಟ್ಟಿಗೆ ಅಂಗಡಿಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳೂ ನಡೆದಿವೆ.

(ಇನ್‌ಫೋವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more