67 ತಾಲ್ಲೂಕಲ್ಲಿ ಕುಡಿಯುವ ನೀರಿಗೆ ಬರ : ತುರ್ತು ಕ್ರಮಕ್ಕೆ ಕೃಷ್ಣ ಸೂಚನೆ
ಬೆಂಗಳೂರು : ರಾಜ್ಯದ ಕೆಲವು ಜಿಲ್ಲೆಗಳು ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೂಚನೆ ನೀಡಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ರಾಜ್ಯದಲ್ಲಿ ತಲೆದೋರಿರುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ಸಮಾಲೋಚನೆಯ ಸಂರ್ದಭದಲ್ಲಿ ಮುಖ್ಯಮಂತ್ರಿ ಕೃಷ್ಣ ಈ ಸೂಚನೆ ನೀಡಿದರು. ಬೀದರ್, ರಾಯಚೂರು. ತುಮಕೂರು, ಗುಲ್ಬರ್ಗಾ, ಚಿತ್ರದುರ್ಗ, ಬಿಜಾಪುರ, ಬಳ್ಳಾರಿ, ಹಾಸನ, ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಕುರಿತು ಸಭೆ ಚರ್ಚೆ ನಡೆಸಿತು.
ಕುಡಿಯುವ ನೀರಿನ ಸಮಸ್ಯೆ ಮಾತ್ರವಲ್ಲದೆ ಜಾನುವಾರುಗಳಿಗೆ ಮೇವಿನ ಕೊರತೆಯೂ ಈ ಜಿಲ್ಲೆಗಳಲ್ಲಿ ಉಂಟಾಗಿದೆ. ಮೇವಿಲ್ಲದೆ ಜಾನುವಾರುಗಳು ಸಾಯುವ ಪರಿಸ್ಥಿತಿ ಬರಬಾರದು. ಮೇವನ್ನು ಒದಗಿಸುವ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಯಾವುದೇ ತಾತ್ಸಾರ ತಾಳಬಾರದು ಎಂದು ಕೃಷ್ಣ ಸ್ಪಷ್ಟ ಸೂಚನೆ ನೀಡಿದರು.
10 ಜಿಲ್ಲೆಗಳ 67 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಕೊರತೆ ಕಾಣಿಸಿಕೊಂಡಿದ್ದು , ಈ ಪ್ರದೇಶಗಳಲ್ಲಿ ಅಗತ್ಯ ಇರುವೆಡೆ ಕೊಳವೆ ಬಾವಿಗಳನ್ನು ಕೊರೆಯುವಂತೆ ಹಾಗೂ ಟ್ಯಾಂಕರ್‌ಗಳಲ್ಲಿ ನೀರನ್ನು ಪೂರೈಸುವಂತೆ ಕೃಷ್ಣ ಸೂಚಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications