ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿಯನು ಹರಿಯಲು ಬಿಟ್ಟು ಕೈಕಟ್ಟಿ ಕುಳಿತುಕೊಳ್ಳಿ ಎನ್ನುತ್ತದೆ ತಮಿಳುನಾಡು

By Staff
|
Google Oneindia Kannada News

ನವದೆಹಲಿ : ಕಾವೇರಿಯನು ಹರಿಯಲು ಬಿಟ್ಟು, ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೆ, ಬಂಗಾರ ಬೆಳೆವ ಈ ನಾಡು ಆಗುತ್ತಿತ್ತೆ...ಸಿರಿನಾಡು ಎಂಬ ಗೀತೆ ನೀವು ಕೇಳಿದ್ದೀರಲ್ಲಾ.. ಆದರೆ, ಈ ಹೊತ್ತು ತಮಿಳುನಾಡು ಆ ರಾಗವನ್ನೇ ಬದಲಿಸಿಬಿಟ್ಟಿದೆ. ಕಾವೇರಿಯನ್ನು ತಡೆಯದೇ ಸುಮ್ಮನೆ ಹರಿಯಬಿಟ್ಟು ಕೈಕಟ್ಟಿ ಕುಳಿತುಕೊಳ್ಳಿ ಎಂಬ ಹೊಸ ವಾದ ಮುಂದಿಟ್ಟಿದೆ.

ಕರ್ನಾಟಕಕ್ಕೆ ನೀರಿನ ಅಗತ್ಯ ಇದ್ದರೆ ಪಶ್ಚಿಮಕ್ಕೆ ಹರಿವ ನದಿಗಳ ದಿಕ್ಕನ್ನು ಬದಲಾಯಿಸಿಕೊಂಡು ನೀರು ಪಡೆಯಲಿ, ಆದರೆ, ಕಾವೇರಿಯನ್ನು ಮಾತ್ರ ಎಲ್ಲೂ ತಡೆಯದೆ ಸಹಜವಾಗಿ ಹರಿಯಲು ಬಿಡಲಿ ಎಂದು ಪಟ್ಟು ಹಿಡಿದಿದೆ. ಗುರುವಾರ ಮತ್ತೆ ಆರಂಭವಾದ ಕಾವೇರಿ ನ್ಯಾಯಮಂಡಳಿಯ ಮುಂದೆ ತಮಿಳುನಾಡು ಪರ ವಕೀಲ ಗಂಗೂಲಿ ಮಂಡಿಸಿದ ವಾದದ ಲಹರಿಯೂ ಇದೇ ಆಗಿತ್ತು.

ಕರ್ನಾಟಕದಲ್ಲಿ ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳಿಂದ 4 ಸಾವಿರ ಟಿಎಂಸಿ ನೀರು ಪೋಲಾಗುತ್ತಿದೆ. ಅವನ್ನು ಗುರುತ್ವಾಕರ್ಷಣ ಪದ್ಧತಿಯಿಂದ ಪೂರ್ವಕ್ಕೆ ಹರಿಯುವಂತೆ ಮಾಡಿದರೆ ಕರ್ನಾಟಕಕ್ಕೆ ಯಥೇಚ್ಛವಾಗಿ ನೀರು ಸಿಗುತ್ತದೆ. ಹೀಗಾಗಿ ತಮಿಳುನಾಡಿನ ರೈತರ ಜೀವನಾಡಿಯಾದ ಕಾವೇರಿಯನ್ನು ಕರ್ನಾಟಕದಲ್ಲಿ ಎಲ್ಲೂ ತಡೆಯದೆ ಮುಕ್ತ ಹರವಿಗೆ ಅವಕಾಶ ನೀಡಬೇಕು ಎಂದು ವಾದಿಸಿದರು.

1924ರಲ್ಲಿ ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಮಾಡಿಕೊಳ್ಳಲಾದ ಒಪ್ಪಂದಗಳ ಬಗ್ಗೆ ವಿವರಿಸುತ್ತಿದ್ದ ಎ.ಕೆ. ಗಂಗೂಲಿ ಅವರು ಈ ಹೊಸ ವಾದವನ್ನು ಮುಂದಿಟ್ಟರು. ಈ ವಾದಕ್ಕೆ ಆಕ್ಷೇಪ ತೆಗೆದ ಕರ್ನಾಟಕ ಪರ ವಕೀಲರಾದ ಹಿರಿಯ ನ್ಯಾಯವಾದಿ ಎಸ್‌.ಎಸ್‌. ಜವಳಿ ಹಾಗೂ ಮೋಹನ್‌ ಕಾತರಕಿ ಅವರು, ಅಂದಿನ ಒಪ್ಪಂದದ ರೀತ್ಯ ತಮಿಳುನಾಡಿನ ಕೇವಲ 3 ಲಕ್ಷ ಎಕರೆ ಭೂಮಿಗೆ ಮಾತ್ರ ನೀರು ಬಳಸಬೇಕು. ಆದರೆ, ಈಹೊತ್ತು 19 ಲಕ್ಷ ಎಕರೆ ಭೂಮಿಗೆ ಪಡೆಯುತ್ತಿದೆ ಎಂದರು.

ಆದರೆ, ಇದನ್ನು ಒಪ್ಪದ ಗಂಗೂಲಿ ಅವರು, ತಮಿಳುನಾಡಿಗೆ ಏಕೈಕ ಜಲಮೂಲ ಕಾವೇರಿ. ಆದರೆ, ಕರ್ನಾಟಕದಲ್ಲಿ ನೇತ್ರಾವತಿ, ಕೃಷ್ಣ ಮೊದಲಾದ ನದಿಗಳಿವೆ. ಇವುಗಳ ದಿಕ್ಕನ್ನು ಬದಲಿಸಿಕೊಂಡು ನೀರು ಪಡೆಯಲಿ ಎಂದರು. ಆಗ ಕರ್ನಾಟಕ ವಕೀಲರು ತಿರುಗೇಟು ನೀಡಿ ನೀವೂ ಕೂಡ ಬಂಗಾಳಕೊಲ್ಲಿಗೆ ವ್ಯರ್ಥವಾಗಿ ಹರಿವ ನೀರನ್ನು ದಿಕ್ಕು ಬದಲಿಸಿಕೊಂಡು ಉಪಯೋಗಿಸಿ ಎಂದರು.

ನದಿಯ ದಿಕ್ಕು ಬದಲಿಸುವ ವಿಷಯ ಹಾಗಿರಲಿ, ನಿಮ್ಮ ವಾದದ ದಿಕ್ಕೇ ಬದಲಾಗುತ್ತಿದೆ. ವಾದವೇನಿದ್ದರೂ ಕಾವೇರಿಗೆ ಮಾತ್ರ ಸೀಮಿತವಾಗಿರಲಿ ಎಂದು ನ್ಯಾಯಮೂರ್ತಿ ಎನ್‌.ಪಿ. ಸಿಂಗ್‌ ತಮಿಳುನಾಡು ವಕೀಲರಿಗೆ ಎಚ್ಚರಿಕೆ ಇತ್ತರು. ಮತ್ತೆ ವಾದ ಮುಂದುವರಿಸಿದ ಗಂಗೂಲಿ ಅವರು, ಕಾವೇರಿ ನದಿಯ ಎಲ್ಲ ಯೋಜನೆಗಳನ್ನೂ ಕೇಂದ್ರ ಜಲ ಪ್ರಾಧಿಕಾರಕ್ಕೆ ವಹಿಸಿ ರಾಜ್ಯ ಮತ್ತು ಅವುಗಳ ಯೋಜನೆಗೆ ತಕ್ಕಂತೆ ಬಳಸಲಿ ಎಂದೂ ವಾದಿಸಿದರು.

ಆದರೆ, ಈ ಅಧಿಕಾರ ನ್ಯಾಯಮಂಡಳಿಗೆ ಇಲ್ಲ ಎಂದು ನ್ಯಾಯಮೂರ್ತಿಗಳು ಗಂಗೂಲಿ ಅವರ ವಾದವನ್ನು ತಳ್ಳಿಹಾಕಿದರು. ಆದರೆ, ಈ ಅಧಿಕಾರ ನ್ಯಾಯಮಂಡಳಿಗಿದೆ ಎಂದು ಗಂಗೂಲಿ ಪ್ರತಿವಾದ ಮಂಡಿಸಿದರು. ಕರ್ನಾಟಕ ಹಾಗೂ ತಮಿಳುನಾಡಿನ ಮಳೆ ಪ್ರಮಾಣದ ಬಗ್ಗೆಯೂ ಗಂಗೂಲಿ ಪ್ರಸ್ತಾಪಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು ಎರಡೂ ರಾಜ್ಯಗಳ ಮಳೆಯ ಪ್ರಮಾಣದ ವಿವರಗಳ ಅಂಗಿ-ಅಂಶ ನೀಡುವಂತೆ ಸೂಚಿಸಿದರು. ಶುಕ್ರವಾರ ಮತ್ತೆ ವಾದ ಸರಣಿ ಮುಂದುವರಿಯಲಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X