‘ಅಕ್ಷರ ಸಂಸ್ಕೃತಿಯ ಹುಟ್ಟಿಗೆ ಮುನ್ನ ರಂಗೋಲಿ ಲಿಪಿಯಾಗಿ ಬಳಕೆಯಲ್ಲಿತ್ತು’
ಮೈಸೂರು : ಅಕ್ಷರ ಸಂಸ್ಕೃತಿಯ ಹುಟ್ಟಿಗೂ ಮುನ್ನ ರಂಗೋಲಿ ಚಿತ್ರಲಿಪಿಯಾಗಿ ಬಳಕೆಯಲ್ಲಿತ್ತು ಎಂದು ಸಂಶೋಧಕಿ ಎನ್.ಎಸ್. ದೇವಿಕಾ ಹೇಳಿದ್ದಾರೆ. ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ರಂಗೋಲಿ ಒಂದು ವಿಶ್ಲೇಷಣೆ ಕುರಿತು ಉಪನ್ಯಾಸ ನೀಡಿದ ಅವರು, ರಂಗೊಲಿ ಹಂತ ಹಂತವಾಗಿ ಬೆಳೆದು ಸ್ವಯತ್ತ ಕಲೆಯಾದ ಪ್ರಕ್ರಿಯೆಯನ್ನು ವಿವರಿಸಿದರು.
ರಂಗೋಲಿ ಆರಂಭದಲ್ಲಿ ಮಾಟ, ಮಂತ್ರ, ತಂತ್ರದ ಕಲೆಯಾಗಿ ಬಳಕೆಯಲ್ಲಿತ್ತು. ಜ್ಯೋತಿಷ್ಯಶಾಸ್ತ್ರದಲ್ಲೂ ರಂಗೋಲಿಗೆ ಪ್ರಾಧಾನ್ಯತೆ ಇತ್ತು. ರಂಗೋಲಿಗೆ ಸುದೀರ್ಘವಾದ ಇತಿಹಾಸವಿದೆ. ಇದು ಒಂದು ಜನಪದ ಕಲೆಯೂ ಹೌದು, ಸಾಂಪ್ರದಾಯಿಕ ಕಲೆಯೂ ಹೌದು. ನಮ್ಮ ಜನಪದ, ಒಗಟು ಹಾಗೂ ಗೀತೆಗಳಲ್ಲಿ ರಂಗೋಲಿಯ ವಿಶ್ಲೇಷಣೆ ಇದೆ ಎಂದರು.
ರಂಗವಲ್ಲಿ ಅಥವಾ ರಂಗೋಲಿ ಕಲೆಗೆ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ನೆಲೆಯೂ ಇದೆ. ಈಜಿಪ್ಟ್, ಸಿಂಧೂ ಕಣಿವೆ ನಾಗರಿಕತೆಯ ಕುರುಹಾಗಿ ದೊರೆತಿರುವ ಮಡಿಕೆಗಳ ಮೇಲೂ ರಂಗವಲ್ಲಿಯ ಚಿತ್ತಾರಗಳಿವೆ ಎಂದು ಅವರು ತಿಳಿಸಿದರು. ಮನೆಯ ಮುಂದೆ ಸಗಣಿಯಿಂದ ಸಾರಿಸಿ, ಅದರ ಮೇಲೆ ಬಿಳಿಯ ರಂಗೋಲಿ ಬಿಡುವುದು ನಮ್ಮ ಸಂಪ್ರದಾಯ.
ಹಬ್ಬ ಹರಿದಿನಗಳಲ್ಲಿ ರಂಗೋಲಿಯ ಎಳೆಗಳ ನಡುವೆ ಬಣ್ಣ ತುಂಬುತ್ತಾರೆ. ಚಿತ್ತಚಿತ್ತಾರದ ಸಂಭ್ರಮದ ಸ್ವಾಗತವನ್ನು ಈ ರಂಗೋಲಿಗಳು ನೀಡುತ್ತವೆ. ರಂಗೋಲಿ ಶುಭ ಸಂಕೇತವಾಗಿ ರೂಢಿಯಲ್ಲಿದೆ ಎಂದರು. ಡಾ. ಜಯಲಕ್ಷ್ಮೀ ಸೀತಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.(ಮೈಸೂರು ಪ್ರತಿನಿಧಿಯಿಂದ)