‘ಗಂಗಾ-ಕಾವೇರಿಯ ಸಮ್ಮಿಲನದಿಂದ ಉತ್ತರ-ದಕ್ಷಿಣದ ಸಮಾಗಮ’
ದಾವಣಗೆರೆ : ಕಾವೇರಿ ನದಿ ನೀರಿನ ಪಾಲಿಗಾಗಿ ತಮಿಳುನಾಡು ಈ ಹೊತ್ತು ನ್ಯಾಯಾಧಿಕರಣದಲ್ಲಿ ತನ್ನ ವಾದ ಮಂಡಿಸುತ್ತಿದೆ. ಕೃಷ್ಣ ನದಿ ನೀರನ್ನು ಕಬಳಿಸಲು ಆಂಧ್ರ ಪ್ರದೇಶ ಕಾತರಿಸುತ್ತಿದೆ. ಅಕ್ರಮ ಫೀಡರ್ ಕಾಲುವೆ ನಿರ್ಮಾಣ ಕಾರ್ಯವೂ ನಡೆದು ಹೋಗಿದೆ. ನೀರಿಗಾಗಿ ಇಷ್ಟೆಲ್ಲಾ ನಡೆಯುತ್ತಿರುವಾಗ...
ಉತ್ತರ - ದಕ್ಷಿಣ ನದಿಗಳ ಮಿಲನದ ಮಾತು ಮತ್ತೆ ಕೇಳಿಬರುತ್ತಿದೆ. ಇದೇ ಫೆ.28ರಂದು ಕೇಂದ್ರ ಸರಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಗಂಗಾ-ಗೋದಾವರಿ-ಕಾವೇರಿ ನದಿಗಳ ಜೋಡಣಾ ಕಾರ್ಯಕ್ಕಾಗಿ ಹಣ ಮೀಸಲಿಡುವಂತೆ ಗಂಗಾ-ಕಾವೇರಿ ನದಿಗಳ ಜೋಡಣಾ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಮಹತ್ವದ ಯೋಜನೆಗೆ ಅಂದಾಜು 1 ಲಕ್ಷ ಕೋಟಿ ರುಪಾಯಿ ವೆಚ್ಚವಾಗಲಿದೆ. ಇದು ಬಹು ಉಪಯೋಗಿ ಯೋಜನೆಯಾಗಿದ್ದು, ಈ ಯೋಜನೆ ಕಾರ್ಯಗತವಾದರೆ, ಬಿಹಾರ, ಒರಿಸ್ಸಾ, ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ವರ್ಷದ ಎಲ್ಲ ಋತುಗಳಲ್ಲೂ ನೀರಾವರಿ ಸೌಲಭ್ಯ ದೊರಕಲಿದೆ.
ಈ ಯೋಜನೆಯಿಂದ ರಾಷ್ಟ್ರದ 185 ಕೋಟಿ ಎಕರೆ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಡುವುದಲ್ಲದೆ, ಜಲವಿದ್ಯುತ್ ಯೋಜನೆಗಳೂ ಸಾಕಾರಗೊಳ್ಳುತ್ತವೆ. ಈ ಯೋಜನೆಗಳಿಂದ 20.75 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂದು ಸಮಿತಿ ಹೇಳಿದೆ.
ಈ ಯೋಜನೆಯ ಬಗ್ಗೆ ಕೇಂದ್ರ ಆಸಕ್ತಿ ತೋರಿ, ಬರುವ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು. ಈ ಯೋಜನೆಯು ಶತಮಾನಗಳಷ್ಟು ಹಳೆಯದಾದ ಕಾವೇರಿ ವಿವಾದವನ್ನೂ ಉಪಶಮನಗೊಳಿಸುತ್ತದೆ. ಮೀನುಗಾರಿಕೆ ಕ್ಷೇತ್ರದಲ್ಲೂ ಗಣನೀಯ ಅಭಿವೃದ್ಧಿ ಸಾಧಿಸಬಹುದಾಗಿದೆ. ಮಿಗಿಲಾಗಿ ಉತ್ತರ ಹಾಗೂ ದಕ್ಷಿಣದ ನಡುವೆ ಜಲಮಾರ್ಗ ಒಂದೂ ನಿರ್ಮಾಣವಾದಂತಾಗುತ್ತದೆ ಎಂದು ಸಮಿತಿ ವಿವರಿಸಿದೆ.
ದೋಣಿ, ಹಡಗುಗಳ ಮೂಲಕ ದಕ್ಷಿಣದ ಮಂದಿ ಉತ್ತರಕ್ಕೂ, ಉತ್ತರದ ಮಂದಿ ದಕ್ಷಿಣಕ್ಕೂ ಸಂಚರಿಸಲು ಮತ್ತು ಕಡಿಮೆ ದರದಲ್ಲಿ ಸರಕು ಸಾಗಣೆ ಮಾಡಲು ಈ ಯೋಜನೆ ನೆರವಾಗುತ್ತದೆ. ಈ ಯೋಜನೆಯಿಂದಾಗಬಹುದಾದ ಸಹಸ್ರಾರು ಉಪಯೋಗಗಳನ್ನು ಪಟ್ಟಿ ಮಾಡಿ, ಈ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಕೋರಿ, ಪ್ರಧಾನಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಸಮಿತಿ ಪತ್ರ ಬರೆದಿದೆ. ಈ ವಿಷಯವನ್ನು ಸಮಿತಿಯ ಎಂ.ಎಸ್.ಕೆ. ಶಾಸ್ತ್ರೀ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
(ಇನ್‌ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...