ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸ್ಸೆಲ್ಸಿ ಪರೀಕ್ಷಾ ಅಕ್ರಮ ತಡೆಗೆ ಹಲವು ಕ್ರಮ, ಮಾ. 21ರಿಂದ ಪರೀಕ್ಷೆ

By Staff
|
Google Oneindia Kannada News

ಮೈಸೂರು : ವಿದ್ಯಾರ್ಥಿಗಳಿಗೆ ಮಹತ್ವದ ಘಟ್ಟವಾದ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಹತ್ತಿರವಾಗುತ್ತಿದೆ. ಪರೀಕ್ಷೆಗೆ ಉಳಿದಿರುವುದು ಇನ್ನೊಂದೇ ತಿಂಗಳು. ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು, ಹೆಸರಾಂತ ಕಾಲೇಜಿನಲ್ಲಿ ಸೀಟು ಗಿಟ್ಟಿಸಲು ಹಗಲಿರುಳು ಓದುತ್ತಿದ್ದರೆ, ಶಿಕ್ಷಣ ಇಲಾಖೆ ಪರೀಕ್ಷಾ ಅಕ್ರಮ ತಡೆಯ ಬಗ್ಗೆ ಹಲವು ಕ್ರಮ ರೂಪಿಸುತ್ತಿದೆ.

ಕಳೆದ ವರ್ಷ ಪ್ರಶ್ನೆಪತ್ರಿಕೆಯ ಬಯಲು, ಮೌಲ್ಯಮಾಪನದಲ್ಲಿನ ಲೋಪದೋಷ, ಫಲಿತಾಂಶದಲ್ಲಾದ ಗೊಂದಲಗಳ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಶಿಕ್ಷಣ ಸಚಿವಾಲಯ ಹಾಗೂ ಪರೀಕ್ಷಾ ಮಂಡಳಿ, ಈ ಬಾರಿ ಪರೀಕ್ಷಾ ಅಕ್ರಮ ತಡೆಗೆ ಹಲವಾರು ಸುಧಾರಣಾ ಕ್ರಮಗಳನ್ನು ಪ್ರಕಟಿಸಿದೆ. ಈ ಸಾಲಿನಿಂದ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಭಾವಚಿತ್ರ ಹಾಕಲಾಗುತ್ತಿದ್ದು, ನಕಲಿ ಅಂಕಪಟ್ಟಿ ಹಾವಳಿ ತಡೆಗೆ ಇದು ನೆರವಾಗಲಿದೆ ಎಂದು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ತಿಳಿಸಿದ್ದಾರೆ.

ಕಳೆದ ವರ್ಷದ ಕಹಿ ಅನುಭವಗಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆಯುಕ್ತ ವಿಜಯಭಾಸ್ಕರ್‌ ನೇತೃತ್ವದಲ್ಲಿ ರಚಿಸಲಾಗಿದ್ದ ಪರೀಕ್ಷಾ ಸುಧಾರಣೆ ಸಮಿತಿ ಮಾಡಿರುವ ಶಿಫಾರಸುಗಳನ್ನು ಸರಕಾರ ಈ ವರ್ಷದಿಂದಲೇ ಜಾರಿಗೊಳಿಸುತ್ತಿದೆ. ಮೌಲ್ಯಮಾಪನದಲ್ಲೂ ಸುಧಾರಣೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ದಂಡ - ಅಮಾನತು: ಕಳೆದ ವರ್ಷ ಮೌಲ್ಯ ಮಾಪನದಲ್ಲಿ ಲೋಪಗಳಿತ್ತು. ಲೋಪ ಎಸಗಿದ ಶಿಕ್ಷಕರಿಂದ 2.75 ಲಕ್ಷ ರುಪಾಯಿ ದಂಡ ವಸೂಲಿ ಮಾಡಲಾಗಿದೆ. 15 ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳುವ ಮೂಲಕ ಸಚಿವರು ಕಳೆದ ಬಾರಿ ಮೌಲ್ಯಮಾಪನ ದೋಷಪೂರಿತವಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಮುಂದೆ ಹೀಗಾಗದಂತೆ ಎಚ್ಚರವಹಿಸಲಾಗುವುದು ಎಂದು ತಿಳಿಸಿರುವ ಅವರು, ಒಂದು ಪ್ರಶ್ನೆ ಪತ್ರಿಕೆಯ ಒಂದೊಂದು ಭಾಗವನ್ನು ಆರು ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಲಾಗುವುದು ಎಂದರು. ಪರೀಕ್ಷಾ ಶುಲ್ಕ ಪಾವತಿಗೆ ನಿಗದಿಪಡಿಸಿದ ಅಂತಿಮ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ. ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾಯಿಸಿ ಕೊಡುವುದಿಲ್ಲ ಎಂದು ವಿಶ್ವನಾಥ್‌ ಹೇಳಿದರು.

ಫಲಿತಾಂಶ ಪ್ರಕಟವಾದ 15 ದಿನಗಳ ಒಳಗಾಗಿ ಅಂಕಪಟ್ಟಿ ನೀಡಲಾಗುವುದು. ಪರೀಕ್ಷೆಯ ಯಾವುದೇ ಹಂತದಲ್ಲಿ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದ ಅವರು, ಶಿಕ್ಷಣವನ್ನು ಜನಾಂದೋಲನವನ್ನಾಗಿ ಮಾಡುವ ಸಲುವಾಗಿ ಹಲವು ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.

ಪರೀಕ್ಷಾರ್ಥಿಗಳಿಗೆ ಉತ್ತಮ ಸೌಲಭ್ಯ : ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂಥ ದುಸ್ಥಿತಿ ಕೆಲವೆಡೆ ಇದೆ. ಈ ಸಾಲಿನಲ್ಲಿ ಹೀಗಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳನ್ನೂ ಪಟ್ಟಿಮಾಡಿ, ನಕ್ಷೆ ತಯಾರಿಸಿ, ಸಕಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು.

21ರಿಂದ ಪರೀಕ್ಷೆ : ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್‌ 21ರಿಂದ ಪ್ರಾರಂಭವಾಗಲಿದ್ದು, 5,42,691ವಿದ್ಯಾರ್ಥಿಗಳು ಪ್ರಥಮಬಾರಿಗೆ ಪರೀಕ್ಷೆಗೆ ಹಾಜರಾಗುತ್ತಿದ್ದರೆ, 1,77,150 ಹಳೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂಬ ಅಂಕಿ-ಅಂಶಗಳನ್ನೂ ನೀಡಿದರು. ಈ ಸಂದರ್ಭದಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಡಿ.ಎಂ. ಭಟ್‌ ಹಾಜರಿದ್ದರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X