ಅಧಿಕಾರಕ್ಕಾಗಿ ಅನೈತಿಕ ಮೈತ್ರಿ, ತತ್ವಗಳಿಗೆ ತಿಲಾಂಜಲಿ -ಕೃಷ್ಣ ವಿಷಾದ
ಬೆಂಗಳೂರು: ಕನಕಪುರ ಲೋಕಸಭಾ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲಿಕ್ಕಾಗಿ ಅನೈತಿಕ ಮೈತ್ರಿಗೆ ಸಿದ್ಧವಾಗುತ್ತಿರುವ ಜಾತ್ಯತೀತ ಜನತಾದಳ ಹಾಗೂ ಸಂಯುಕ್ತ ಜನತಾದಳ ಪಕ್ಷಗಳ ಧೋರಣೆಯನ್ನು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಟೀಕಿಸಿದ್ದಾರೆ.
ತತ್ವ ಹಾಗೂ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿ, ಅಧಿಕಾರಕ್ಕಾಗಿ ಯಾರೊಂದಿಗಾದರೂ ಗೆಳೆತನ ಬೆಳೆಸಿದರೆ ರಾಜಕೀಯ ಜೀವನ ಬಡವಾಗುತ್ತದೆ. ಇಂಥ ರಾಜಕಾರಣ ಯಾವತ್ತೂ ಶ್ರೀಮಂತವಾಗುವುದಿಲ್ಲ ಎಂದು ಸಂಕ್ರಾಂತಿ ಸೋಮವಾರ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕೃಷ್ಣ ಹೇಳಿದರು. ತಮ್ಮ ಭಾಷಣದುದ್ದಕ್ಕೂ, ಹೆಗಡೆ ಅಥವಾ ದೇವೇಗೌಡ ಅವರ ಹೆಸರನ್ನು ಪ್ರಸ್ತಾಪಿಸದೆಯೇ ಮುಖ್ಯಮಂತ್ರಿ ಕೃಷ್ಣ ಪರೋಕ್ಷವಾಗಿ ಟೀಕಿಸಿದರು.
ರಾಜ್ಯದ ಬೊಕ್ಕಸ ದಿವಾಳಿಯಾಗಿದೆ ಎಂದು ಗುಲ್ಲು ಹಬ್ಬಿಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ, ಕೇಂದ್ರ ಯೋಜನಾ ಆಯೋಗ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗೆಗೆ ತೃಪ್ತಿ ವ್ಯಕ್ತಪಡಿಸಿದೆ ಎಂದು ಹೇಳಿದರು.
ದಳ ದಳ ದಳವಾಗಲು ದೇವೇಗೌಡರೇ ಕಾರಣ : ಜನತಾದಳ ವಿಭಜನೆಗೊಂಡಾಗಲೆಲ್ಲ ಅದರ ಹಿಂದೆ ದೇವೇಗೌಡ ಇರುತ್ತಾರೆ. ಅಧಿಕಾರಕ್ಕಾಗಿ ದೇವೇಗೌಡ ಎಂಥ ರಾಜಕಾರಣಕ್ಕೂ ಸಿದ್ಧ . ಮತ್ತೆ ಅಧಿಕಾರದ ಆಸೆಯಿಂದಲೇ ದೇವೇಗೌಡರು ಅನೈತಿಕ ರಾಜಕಾರಣಕ್ಕೆ ಮೊರೆ ಹೋಗಿದ್ದಾರೆ. ಇಂಥ ರಾಜಕಾರಣಿಗಳ ಬಗ್ಗೆ ಜನತೆ ಎಚ್ಚರದಿಂದಿರಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಹಕಾರ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications