ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಆತ್ಮಹತ್ಯೆ ಯಾಕೆ?

By Staff
|
Google Oneindia Kannada News

Why Karnataka Farmers commiting suicide?ಬೆಂಗಳೂರು : ಜನವರಿ 24, 2001. ಆಲೂಗಡ್ಡೆ ಬೆಳೆ ನೆಲ ಕಚ್ಚಿದ ಕಾರಣ ಆತ್ಮಹತ್ಯೆ ಮಾಡಿಕೊಂಡ ಹುಬ್ಬಳ್ಳಿಯ ಸುತಗಟ್ಟಿ ಗ್ರಾಮದ ರೈತನ ಕುಟುಂಬಕ್ಕೆ ದೇವೇಗೌಡರು ಖುದ್ದು ಹೋಗಿ, ತಮ್ಮ ಪಕ್ಷದ ವತಿಯಿಂದ 10 ಸಾವಿರ ರುಪಾಯಿ ಧನ ಪರಿಹಾರ ಕೊಟ್ಟು ಬಂದರು. ರೈತರ ಆತ್ಮಹತ್ಯೆಯೆಂಬ ಪೆಡಂಭೂತದಂಥ ಸಮಸ್ಯೆ ಎಸ್‌.ಎಂ.ಕೃಷ್ಣ ಸರ್ಕಾರಕ್ಕೆ ಆಗ ಹೊಸ ವರ್ಷದ ಉಡುಗೊರೆಯಾಗಿತ್ತು !

ನಂತರದ ದಿನಗಳಲ್ಲಿ ಕಾಲಕ್ಕೆ ಸರಿಯಾಗಿ ಮಳೆಯಾಗದೆ ಸಮಸ್ಯೆ ಇನ್ನೂ ಬಿಗಡಾಯಿಸಿತು. ಪರಿಣಾಮ ಧಾರವಾಡ (ಮಾರ್ಚ್‌, 2001ರವರೆಗೆ 8 ತಿಂಗಳಲ್ಲಿ 24), ಹಾವೇರಿ (ಕಳೆದ 8 ತಿಂಗಳಲ್ಲಿ 19) ಜಿಲ್ಲೆಗಳಲ್ಲಿ ರೈತರು ಸ್ಪರ್ಧೆಗೆ ಬಿದ್ದವರಂತೆ ಆತ್ಮಹತ್ಯೆ ಮಾಡಿಕೊಂಡರು. ಮಧ್ಯೆ ಮಧ್ಯೆ ಬಸವನ ಬಾಗೇವಾಡಿ, ಕೋಲಾರ, ಗುಲಬರ್ಗಾ, ಬಿಜಾಪುರದಲ್ಲೂ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾದವು. ಉತ್ತರ ಕರ್ನಾಟಕದಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿರುವಂತೆಯೇ ಬಯಲುಸೀಮೆ ಬೆಂಗಳೂರಿಗೆ ಅಂಟಿಕೊಂಡೇ ಇರುವ ನೆಲಮಂಗಲದಲ್ಲೂ ರೈತನ ಆತ್ಮಹತ್ಯೆ ಪ್ರಕರಣ ಮೊನ್ನೆಯಷ್ಟೇ ಹೊರಬಿತ್ತು.

ಹೈಟೆಕ್‌ ಪಟ್ಟ ಹೊತ್ತಿರುವ ಮುಖ್ಯಮಂತ್ರಿ ಕೃಷ್ಣ ಬೊಕ್ಕಸದಲ್ಲಿ ಹಣದ ಕೊರೆ ಸಮಸ್ಯೆ ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಇದಿರಾಗಿರುವ ಗಂಭೀರ ಸಮಸ್ಯೆಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಬಹು ಮುಖ್ಯವಾದದ್ದು. ರೈತರು ಈ ಪರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾದರೂ ಯಾತಕ್ಕೆ ಎಂಬುದನ್ನು ತಿಳಿಯಲು 2001ರ ಆಗಸ್ಟ್‌ ನಲ್ಲಿ ಮುಖ್ಯಮಂತ್ರಿಗಳು ಒಂದು ವೈಜ್ಞಾನಿಕ ಸಮಿತಿ ರಚಿಸಿದರು. ಈಗ ಈ ಸಮತಿ ಅಧ್ಯಯನ ಪೂರೈಸಿದ್ದು ಇನ್ನೇನು ವರದಿ ಪ್ರಕಟವಾಗಲಿದೆ. ಸಮಿತಿಗೆ ಹಾಗೂ ನಮಗೆ ತೀರಾ ಹತ್ತಿರದವರೊಬ್ಬರು ತಿಳಿಸಿರುವಂತೆ- ‘ಕೇವಲ ಬೆಳೆ ನಾಶ ಅಥವಾ ಬೆಂಬಲ ಕುಸಿತವೊಂದೇ ರೈತರ ಆತ್ಮಹತ್ಯೆಗೆ ಕಾರಣವಲ್ಲ. ಇಲ್ಲಿ ವೈಯಕ್ತಿಕ ಕಾರಣಗಳೇ ಮುಖ್ಯವಾಗಿವೆ ಎಂಬುದು ಸಮಿತಿಯ ನಿಲುವು’.

ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ವೀರೇಶ್‌ ಸಮಿತಿ ಅಧ್ಯಯನ ನಡೆಸಿದ್ದು ಹೀಗೆ- 21 ವಿಷಯಗಳ ಬಗ್ಗೆ 165 ಪ್ರಶ್ನೆಗಳನ್ನು ಸಿದ್ಧಪಡಿಸಿತು. 25 ಸಾವಿರ ಪ್ರತಿಗಳನ್ನು ವಿವಿಧ ರೈತ ಕುಟುಂಬಗಳಿಗೆ ಹಂಚಿತು. ಜೀವನ ಕ್ರಮ, ಸಾಲ, ಸೇವಿಸುವ ಆಹಾರ, ಲೈಂಗಿಕ ಸಮಸ್ಯೆಗಳು, ಧಾರ್ಮಿಕ ನಂಬಿಕೆಗಳು, ಕುಡಿತ- ಜೂಜಿನ ಚಟ, ವಿವಾಹೇತರ ಸಂಬಂಧ, ಸ್ಥಳೀಯ ಸಾಮಾಜಿಕ ಸ್ಥಿತಿ, ರಾಜಕೀಯ ಚಟುವಟಿಕೆಗಳು, ಯಾವುದಾದರೂ ಸಂಸ್ಥೆಗಳೊಡನೆ ಸಂಬಂಧ ಹೀಗೆ ಹಲವಾರು ಮಾಹಿತಿಗಳನ್ನು ಕಲೆಹಾಕಲಾಯಿತು. ಈ ಮಾಹಿತಿಗಳಿಂದ ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದ ರೈತರ ಸಾಮಾಜಿಕ ಸ್ಥಿತಿಯನ್ನು ಅಂದಾಜು ಮಾಡಲು ಸಾಧ್ಯವಾಯಿತು.

ಸಮಿತಿಯ ಅಧ್ಯಯನದಿಂದ ತಿಳಿದುಬಂದಿರುವ ಮಹತ್ವದ ಮಾಹಿತಿಗಳು...

  • ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯದ 147 ರೈತರ ಪೈಕಿ ಪ್ರತಿಶತ 65 ಮಂದಿಗೆ ಕುಡಿತದ ಚಟವಿತ್ತು. ಶೇ.55ರಷ್ಟು ರೈತರಿಗೆ ವಿವಾಹೇತರ ಸಂಬಂಧ ಇತ್ತು.
  • ಪ್ರತಿಶತ 65ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಖಾಸಗಿ ಸಾಲಗಳನ್ನು ತೀರಿಸಲಾಗದ ಕಾರಣಕ್ಕೆ. ಈ ಸಾಲದ ಬಹುಪಾಲನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ವಿನಿಯೋಗಿಸಿದ್ದಾರೆ. ಬಡ್ಡಿ, ಚಕ್ರಬಡ್ಡಿ ಕಂಡಾಪಟ್ಟೆ ಬೆಳೆದ ಕಾರಣ ಈ ರೈತರು ತಮ್ಮನ್ನು ತಾವೇ ಕೊಂದುಕೊಂಡಿದ್ದಾರೆ.
  • 1967- 68 ಹಾಗೂ 1985- 88ರ ಅವಧಿಯಲ್ಲಿ ಕರ್ನಾಟಕದಲ್ಲಿ ಬರ ತಲೆದೋರಿತ್ತು. ಆಗಿನ ಕ್ಷಾಮ ಸ್ಥಿತಿಗೆ ಹೋಲಿಸಿದಲ್ಲಿ 1999- 2000ರ ಪರಿಸ್ಥಿತಿ ಚೆನ್ನಾಗೇ ಇತ್ತು. ಮಳೆ ಕೈಕೊಟ್ಟಿದ್ದರೂ, ತೀರಾ ತುತ್ತು ಅನ್ನಕ್ಕೆ ಕುತ್ತು ಅನ್ನುವಷ್ಟು ಅದರ ಹೊಡೆತ ಗಂಭೀರವಾಗಿರಲಿಲ್ಲ.
  • ಕಳೆದ ಸೆಪ್ಟೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ 1 ಲಕ್ಷ ರುಪಾಯಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಕೃಷ್ಣ ಘೋಷಿಸಿದರು. ತನ್ನ ಮನೆಯ ಪರಿಸ್ಥಿತಿ ಆ ಸಹಾಯ ಧನದಿಂದಲಾದರೂ ಸುಧಾರಿಸಬಹುದೆನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ರೈತರೂ ಉಂಟು ಎನ್ನುತ್ತಾರೆ ಮನಃಶಾಸ್ತ್ರಜ್ಞರು.
ಒಟ್ಟಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪೂರ್ಣ ವಿರಾಮ ಇನ್ನೂ ಸಿಕ್ಕಿಲ್ಲ. ರೈತ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಎನ್ನುವುದು ಗೊತ್ತಾಗುವ ಮೊದಲೇ ಪರಿಹಾರ ಕೊಡುವಂತೆ ಒತ್ತಾಯ ಕಂಡುಬರುತ್ತಿದೆ. ಇದೇ ವೇಳೆಯಲ್ಲಿ ಕೆಲವು ಅವಕಾಶವಾದಿಗಳು ಘೕರಾವ್‌ ಮಾಡಿ, ಧಮಕಿ ಹಾಕುವಷ್ಟರ ಮಟ್ಟಿಗೂ ಮುಂದುವರೆದಿರುವ ಉದಾಹರಣೆಗಳಿವೆ. ವೀರೇಶ್‌ ಸಮಿತಿ ತನ್ನ ಕೆಲಸ ಮುಗಿಸಿದೆ. ಆದರೆ ಅದನ್ನು ಮುಂದಿಟ್ಟುಕೊಂಡಿರುವ ಮುಖ್ಯಮಂತ್ರಿಗಳು ಏನು ಮಾಡುತ್ತಾರೋ ಮುಂದಿನ ವರ್ಷ ಗೊತ್ತಾಗುತ್ತದೆ.

ರೈತರ ಆತ್ಮಹತ್ಯೆಯ ಡೈರಿ
ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X